ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೈಗರ್ ಚಿತ್ರದ ಫ್ಲಾಪ್ ನಂತರ ವಿಜಯ್ ದೇವರಕೊಂಡ ಸ್ವಲ್ಪ ಗ್ಯಾಪ್ ತೆಗೆದುಕೊಂಡು ಮತ್ತೆ ಸತತ ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಸಮಂತಾ ಜೊತೆ ಖುಷಿ ಸಿನಿಮಾ ಮಾಡಿದ್ದ ವಿಜಯ್, ಇದೀಗ ಕೈಯಲ್ಲಿ ಎರಡು ಚಿತ್ರಗಳಿವೆ. ಗೌತಮ್ ತಿನ್ನನೂರಿ ನಿರ್ದೇಶನದಲ್ಲಿ ವಿಜಯ್ ದೇವರಕೊಂಡ ಅವರ 12 ನೇ ಚಿತ್ರ ಮತ್ತು ಗೀತ ಗೋವಿಂದಂನಂತಹ ಹಿಟ್ ಚಿತ್ರ ನೀಡಿದ ಪರುಶುರಾಮ್ ಅವರ ನಿರ್ದೇಶನದಲ್ಲಿ ವಿಜಯ್ ದೇವರಕೊಂಡ ಅವರ 13 ನೇ ಚಿತ್ರ ತೆರೆಗೆ ಬರಲಿವೆ.
ವಿಜಯ್ ದೇವರಕೊಂಡ ಅವರ 12 ನೇ ಚಿತ್ರ ಭಾರೀ ನಿರೀಕ್ಷೆಯನ್ನು ಹೊಂದಿದೆ. ವಿಡಿ 12 ಅವಧಿಯ ಸ್ಪೈ ಥ್ರಿಲ್ಲರ್ ಎಂದು ಹೇಳಲಾಗುತ್ತಿದೆ. ಈಗಾಗಲೇ ರಿಲೀಸ್ ಆಗಿರುವ ಪೋಸ್ಟರ್ ವೈರಲ್ ಆಗಿದ್ದು, ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ. ಈ ಸಿನಿಮಾದಲ್ಲಿ ಶ್ರೀಲೀಲಾ ನಾಯಕಿ. ಚಿತ್ರದ ಪೂಜಾ ಕಾರ್ಯಕ್ರಮ ಕೂಡ ಮುಗಿದಿದ್ದು, ಶೂಟಿಂಗ್ ಕೂಡ ಶುರುವಾಗಿದೆ ಎಂದು ವರದಿಯಾಗಿದೆ. ಆದರೆ ಕಳೆದ ಕೆಲವು ದಿನಗಳಿಂದ ಶ್ರೀಲೀಲಾ ಈ ಸಿನಿಮಾದಿಂದ ಹೊರಹೋಗಿದ್ದು, ಆ ಜಾಗಕ್ಕೆ ರಶ್ಮಿಕಾ ಅವರನ್ನು ತೆಗೆದುಕೊಳ್ಳಲಾಗಿದೆ ಎಂಬ ಸುದ್ದಿಯಿದೆ.
ಈ ಬಗ್ಗೆ ಅಧಿಕೃತವಾಗಿ ಚಿತ್ರತಂಡ ಪ್ರತಿಕ್ರಿಯೆ ನೀಡಿಲ್ಲ. ವಿಜಯ್ ಮತ್ತು ರಶ್ಮಿಕಾ ಈಗಾಗಲೇ ಗೀತಾ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇವರಿಬ್ಬರ ನಡುವೆ ಪ್ರೀತಿ, ಡೇಟಿಂಗ್ ಇದೆ ಎಂಬ ಗುಸು ಗುಸು ನಡುವೆ ನಾವಿಬ್ಬರು ಒಳ್ಳೆ ಸ್ನೇಹಿತರಷ್ಟೇ ಎಂಬ ಅವರ ಮಾತುಗಳೂ ವೈರಲ್ ಆಗಿವೆ.