ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಅನಿಮಲ್’, ‘ಪುಷ್ಪ 2’ ಈಗ ‘ಛಾವಾ’ ಸಿನಿಮಾಗಳು ಭಾರಿ ದೊಡ್ಡ ಕಲೆಕ್ಷನ್ ಮಾಡಿವೆ. ಇದರ ನಡುವೆ ರಶ್ಮಿಕಾ ಮಂದಣ್ಣಗೆ ಮತ್ತೊಂದು ಬಂಪರ್ ಆಫರ್ ಅರಸಿ ಬಂದಿದೆ.
‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾ ನಿರ್ದೇಶನ ಮಾಡಿರುವ ಸುಕುಮಾರ್ ಅವರ ಹೊಸ ಸಿನಿಮಾದಲ್ಲಿ ನಟಿಸುವ ಅವಕಾಶ ರಶ್ಮಿಕಾ ಮಂದಣ್ಣಗೆ ದೊರೆತಿದೆ. ಅದೂ ಪ್ಯಾನ್ ಇಂಡಿಯಾ ಸ್ಟಾರ್ ನಟ ಈ ಸಿನಿಮಾಕ್ಕೆ ನಾಯಕ ಆಗಿದ್ದಾರೆ. ‘ಪುಷ್ಪ 2’ ಸಿನಿಮಾ ಚಿತ್ರೀಕರಣದ ಸಮಯದಲ್ಲಿಯೇ ಸುಕುಮಾರ್, ತಮ್ಮ ಮುಂದಿನ ಸಿನಿಮಾವನ್ನು ರಾಮ್ ಚರಣ್ಗಾಗಿ ಮಾಡುವುದಾಗಿ ಘೋಷಣೆ ಮಾಡಿದ್ದರು. ಅಂತೆಯೇ ಇದೀಗ ರಾಮ್ ಚರಣ್ ಹಾಗೂ ಸುಕುಮಾರ್ ಸಿನಿಮಾಕ್ಕೆ ವೇದಿಕೆ ಸಜ್ಜಾಗುತ್ತಿದ್ದು, ಈ ಸಿನಿಮಾದ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅನ್ನು ಆಯ್ಕೆ ಮಾಡಲಾಗಿದೆ.
‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾದ ಮೂಲಕ ಸುಕುಮಾರ್ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರುವ ರಶ್ಮಿಕಾ ಮಂದಣ್ಣ, ಸುಕುಮಾರ್ ಅವರ ಬಗ್ಗೆ ಪ್ರತ್ಯೇಕ ಇನ್ಸ್ಟಾಗ್ರಾಂ ಪೋಸ್ಟ್ ಒಂದನ್ನು ‘ಪುಷ್ಪ 2’ ಸಿನಿಮಾ ಬಿಡುಗಡೆ ಸಮಯದಲ್ಲಿ ಹಂಚಿಕೊಂಡಿದ್ದರು. ಇದೀಗ ಸುಕುಮಾರ್ ಅವರ ಹೊಸ ಸಿನಿಮಾಕ್ಕೆ ಮತ್ತೊಮ್ಮೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಆ ಮೂಲಕ ಸುಕುಮಾರ್ ನಿರ್ದೇಶನದ ಮೂರು ಸಿನಿಮಾದಲ್ಲಿ ಸಹ ನಾಯಕಿಯಾಗಿ ನಟಿಸಿದ ಶ್ರೇಯವನ್ನು ರಶ್ಮಿಕಾ ಪಡೆದುಕೊಳ್ಳಲಿದ್ದಾರೆ.