ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ಸೇವಿಕಾ ಸಮಿತಿಯ ನಾಲ್ಕನೇ ಪ್ರಮುಖ ಸಂಚಾಲಿಕರಾಗಿದ್ದ ಪ್ರಮೀಳಾ ತಾಯಿ ಮೇಧೆ ಗುರುವಾರ (ಜು. 31) ಬೆಳಗ್ಗೆ ನಿಧನ ಹೊಂದಿದರು. ಅವರಿಗೆ 97 ವರ್ಷ ವಯಸ್ಸಾಗಿತ್ತು.
ಮಹಾರಾಷ್ಟ್ರದ ನಾಗ್ಪುರ ಅಹಲ್ಯಾಬಾಯಿ ಮಂದಿರದಲ್ಲಿ ಅವರು ನಿಧನರಾಗಿದ್ದಾರೆ. ಅವರ ಆಶಯದಂತೆ, ಅವರ ದೇಹವನ್ನು ಏಮ್ಸ್ (AIMS) ಆಸ್ಪತ್ರೆಗೆ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಆರ್‌ಎಸ್‌ಎಸ್ ಮುಖಂಡ ಮೋಹನ್ ಭಾಗವತ್ , ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಪ್ರಮೀಳಾ ತಾಯಿ ಮೇಧೆ 1929ರ ಜೂ. 8ರಂದು ಜನಿಸಿದರು. ರಾಷ್ಟ್ರ ಸೇವಿಕಾ ಸಮಿತಿಯಲ್ಲಿ ಅಖಿಲ ಭಾರತೀಯ ಪ್ರಮುಖ್ ಕಾರ್ಯವಾಹಿಕರಾಗಿ 1978ರಿಂದ 2003ರ ನಡುವೆ ಕಾರ್ಯ ನಿರ್ವಹಿಸಿದ್ದರು. 2006ರಿಂದ 2012ರಲ್ಲಿ ರಾಷ್ಟ್ರ ಸೇವಿಕಾ ಸಮಿತಿಯ 4ನೇ ಪ್ರಮುಖ ಸಂಚಾಲಿಕರಾಗಿದ್ದರು. ಅವರು 1965ರಿಂದ ನಾಗ್ಪುರ ದೇವಿ ಅಹಲ್ಯಾ ಮಂದಿರದಲ್ಲಿ ವಾಸವಾಗಿದ್ದರು.
ಮೋಹನ್ ಭಾಗವತ್ ಕಂಬನಿ
ಮೇಧೆ ಅವರ ನಿಧನದೊಂದಿಗೆ ಪ್ರೀತಿಯ ಸೆಲೆಯೊಂದು ನಮ್ಮಿಂದ ದೂರವಾಗಿದೆ. ಈಶಾನ್ಯದ ಕಠಿಣ ಪರಿಸ್ಥಿತಿಗಳಲ್ಲೂ ಅವರು ಸಂಘಟನೆಗಾಗಿ ತುಂಬಾ ಶ್ರಮಿಸಿದ್ದರು. ಈ ಮೂಲಕ ನಮಗೆಲ್ಲ ಮಾದರಿಯಾಗಿದ್ದಾರೆ. ಅವರ ಜೀವನವು ನಮಗೆ ಸ್ಫೂರ್ತಿ ಎಂದು ಮೋಹನ್ ಭಾಗವತ್ ಅಂತಿಮ ನಮನ ಸಲ್ಲಿಸಿ ತಿಳಿಸಿದರು.