ಹೊಸದಿಗಂತ ವರದಿ, ಶಿವಮೊಗ್ಗ:
ಸಾಹಿತ್ಯ ಓದುವುದರಿಂದ ವರ್ತಮಾನದಿಂದ ಭೂತಕಾಲವನ್ನು ತಿಳಿದುಕೊಂಡು ಭವಿಷ್ಯದ ಬಗ್ಗೆ ಆಲೋಚಿಸಲು ಸಹಕಾರಿ ಆಗಲಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಟ್ಟಾಭಿರಾಮ ಅಭಿಪ್ರಾಯಿಸಿದರು.
ರಾಷ್ಟ್ರೋತ್ಥಾನ ಪರಿಷತ್ ವತಿಯಿಂದ ನಗರದ ಕರ್ನಾಟಕ ಸಂಘದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ಆಯೋಜಿಸಿರುವ ಪುಸ್ತಕ ಪ್ರದರ್ಶನ ಮತ್ತು ಮಾರಾಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಯಾವುದೇ ಸಾಹಿತ್ಯ ಓದಿದರೂ ಭೂತ ಕಾಲಕ್ಕೆ ಕರೆದುಕೊಂಡು ಹೋಗುತ್ತದೆ. ಮಹಾಭಾರತ ಓದಿದರೆ ದ್ವಾಪರ ಯುಗಕ್ಕೆ ಹೋಗುತ್ತೇವೆ. ರಾಮಾಯಣ ಓದಿದರೆ ತ್ರೇತಾಯುಗಕ್ಕೆ ಹೋಗುತ್ತೇವೆ. ಶಿವಾಜಿ ಬಗ್ಗೆ ಓದಿದರೆ ಶಿವಾಜಿ ಕಾಲದ ಬಗ್ಗೆ ತಿಳಿದುಕೊಳ್ಳುತ್ತೇವೆ. ವರ್ತಮಾನ, ಭೂತ ಕಾಲವನ್ನು ತಿಳಿದುಕೊಂಡು, ಭವಿಷ್ಯತ್ ಕಾಲದ ಬಗ್ಗೆ ಚಿಂತನೆಯನ್ನು ಸಾಹಿತ್ಯ ಓದುವುದರಿಂದ ಮಾಡಬಹುದಾಗಿದೆ ಎಂದರು.
ಮತ್ತೆ ಮತ್ತೆ ಮನನ ಮಾಡಿಕೊಳ್ಳಲು ಸಾಹಿತ್ಯದ ಓದು ನೆರವಾಗುತ್ತದೆ. ಸಾಹಿತ್ಯ ಸಂಗ್ರಹ ಬಹಳ ಮಹತ್ವದ್ದು. ಪ್ರಪಂಚದ ಎಲ್ಲಾ ದೇಶಗಳಿಗಿಂತ ಹೆಚ್ಚು ಸಾಹಿತ್ಯ ಸಂಗ್ರಹ ಭಾರತದಲ್ಲಿದೆ. ಭಾರತದ ಇತಿಹಾಸ, ಪರಂಪರೆ, ವರ್ತಮಾನವನ್ನು ಅರಿಯಲು ಸಾಹಿತ್ಯ ಒಂದು ಸಾಧನ ಎಂದರು.
ಕರ್ನಾಟಕ ಸಂಘದ ಅಧ್ಯಕ್ಷ ಸುಂದರರಾಜ್,
ರಾಷ್ಟ್ರೋತ್ಥಾನ ಪರಿಷತ್ ಅಧ್ಯಕ್ಷ ಡಾ.ಸುಧೀಂದ್ರ, ಸಂಚಾಲಕ ಎಂ.ಆರ್.ಸುರೇಶ್, ಉಪಾಧ್ಯಕ್ಷ ಡಾ.ನಾಗರಾಜ ಪರಿಸರ, ಡಾ.ಕಾಂತರಾಜ್, ನವೀನ್, ರಾಚಪ್ಪ ಇನ್ನಿತರರು ಇದ್ದರು.