ಶಾಸಕ ಹರೀಶ್ ಪೂಂಜಾಗೆ ಬೆದರಿಕೆ ಒಡ್ಡಿದ ಪ್ರಕರಣ: ಸಿಐಡಿ ಅಧಿಕಾರಿಗಳಿಂದ ತನಿಖೆ ಆರಂಭ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಕನ್ನಡ ಜಿಲ್ಲೆಯ ಫರಂಗಿಪೇಟೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಕಾರು ಅಡ್ಡಗಟ್ಟಿ ಬೆದರಿಕೆ ಒಡ್ಡಿದ ಪ್ರಕರಣದ ತನಿಖೆಯನ್ನು ಬುಧವಾರ ಸಿಐಡಿ ಅಧಿಕಾರಿಗಳು ಕೈಗೆತ್ತಿಕೊಂಡಿದ್ದಾರೆ.

ಸಿಐಡಿ ಇನ್ಸ್ ಪೆಕ್ಟರ್ ಶಿವರಾಜ್ ನೇತೃತ್ವದ ತಂಡ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗಾಗಮಿಸಿ ದಾಖಲಾಗಿರುವ ಶಾಸಕ ಹರೀಶ್ ಪೂಂಜಾ ಅವರಿಗೆ ಬೆದರಿಕೆ ಹಾಕಿರುವ ಪ್ರಕರಣ ಸಂಬಂಧಿಸಿದ ಕಡತವನ್ನು ಎಸ್ ಐ ಹರೀಶ್ ಅವರಿಂದ ಮುಂದಿನ ತನಿಖೆಗಾಗಿ ಪಡೆದುಕೊಂಡಿದ್ದು,ಬುಧವಾರದಿಂದಲೇ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಈ ಪ್ರಕರಣದಲ್ಲಿ‌ ಮಂಗಳೂರು ಪಳ್ನೀರ್ ನಿವಾಸಿರಿಯಾಜ್ ಎಂಬಾತನನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದು,ಸದ್ಯ ಈತ ನ್ಯಾಯಾಲಯದಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾನೆ.

ರಾಜ್ಯದಲ್ಲಿಯೇ ತಲ್ಲಣಗೊಳಿಸಿದ್ದ ಈ ಪ್ರಕರಣದ ಬಗ್ಗೆ ದ.ಕ.ಜಿಲ್ಲೆಯ ಸಂಘಪರಿವಾರದ ಸಂಘಟನೆಗಳು ಸಹಿತ ಪಕ್ಷದ ಮುಖಂಡರು ಈ ಪ್ರಕರಣ ಹಿಂದೆ ಜಿಹಾದಿ ಶಕ್ತಿಗಳ ಕೈವಾಡವಿದ್ದು,ಪ್ರಕರಣ ವಿಸ್ತೃತ ತನಿಖೆ ನಡೆಸುವಂತೆ ಒತ್ತಾಯಿಸಿತ್ತು.ಈ ಹಿನ್ನಲೆಯಲ್ಲಿ ಸರಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಐಡಿಗೊಪ್ಪಿಸಿತ್ತು.

ಇದೀಗ ಸಿಐಡಿ ಅಧಿಕಾರಿಗಳು ಪ್ರಕರಣದ ಮುಂದಿನ ತನಿಖೆಯನ್ನು ಕೈಗೆತ್ತಿಕೊಂಡಿರುವ ಹಿನ್ನಲೆಯಲ್ಲಿ ನ್ಯಾಯಾಲಯದ ಜಾಮೀನಿನ ಮೇಲೆ ಹೊರಗಿರುವ ಪ್ರಕರಣದ ಆರೋಪಿ ರಿಯಾಜ್ ಗೆ ತಮ್ಮ ಮುಂದೆ ಹಾಜರಾಗುವಂತೆ ಸಿಐಡಿ ಪೊಲೀಸ್ ಅಧಿಕಾರಿಗಳು ಪ್ರತ್ಯೇಕ ನೊಟೀಸ್ ಜಾರಿಗೊಳಿಸುವ ಸಾಧ್ಯತೆ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here