ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈನ ಬಾಂದ್ರಾ ಉಪನಗರದಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್ ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಈ ವೇಳೆ ಸಾರ್ವಜನಿಕರು ರವೀನಾ ಮೇಲೆ ಹಲ್ಲೆ ನಡೆಸಿರುವುದಾಗಿ (Raveena Tandon) ವರದಿಯಾಗಿದೆ. ಸ್ಥಳೀಯರು ನಟಿಯನ್ನು ಸುತ್ತುವರೆದು ಹಲ್ಲೆ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆರಂಭಿಕ ಮಾಹಿತಿಯ ಪ್ರಕಾರ, ರಿಜ್ವಿ ಕಾಲೇಜು ಬಳಿಯ ಕಾರ್ಟರ್ ರಸ್ತೆಯಲ್ಲಿಶನಿವಾರ ತಡರಾತ್ರಿ ರವೀನಾ ಅವರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಮೂವರಿಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ನಟಿ ಕುಡಿದ ಅಮಲಿನಲ್ಲಿ ತನ್ನ ಕಾರಿನಿಂದ ಇಳಿದು ಸಂತ್ರಸ್ತರಿಗೆ ನಿಂದಿಸಿ ಹಲ್ಲೆ ನಡೆಸಿರುವುದಾಗಿಯೂ ವರದಿಯಾಗಿದೆ.
ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಸಂತ್ರಸ್ತರು ಮತ್ತು ಸ್ಥಳೀಯರು ರವೀನಾಳನ್ನು ಸುತ್ತುವರಿದು ಪೊಲೀಸರಿಗೆ ಕರೆ ಮಾಡಿದ್ದಾರೆ.
ಈ ವೇಳೆ ವಿಡಿಯೋಗಳನ್ನು ರೆಕಾರ್ಡ್ ಮಾಡಬೇಡಿ ಎಂದು ರವೀನಾ ನೆರೆದವರಲ್ಲಿ ವಿನಂತಿಸಿದ್ದಾರೆ. “ತಳ್ಳಬೇಡಿ, ದಯವಿಟ್ಟು ನನಗೆ ಹೊಡೆಯಬೇಡಿ” ಎಂದು ರವೀನಾ ಮೊರೆ ಇಡುತ್ತಿರುವುದು ವಿಡಿಯೋದಲ್ಲಿ ವೈರಲ್ ಆಗಿದೆ.
ನಂತರ ಮಹಮ್ಮದ್ ಎನ್ನುವ ವ್ಯಕ್ತಿ ಈ ಘಟನೆಯನ್ನು ವಿವರಿಸಿದ್ದಾರೆ. ಇಡೀ ಘಟನೆಯನ್ನು ವಿಡಿಯೋ ಮೂಲಕ ತಿಳಿಸಿದ್ದಾರೆ. ವಿಡಿಯೋದಲ್ಲಿ ಮಾತನಾಡಿದ ವ್ಯಕ್ತಿ ʻʻತನ್ನ ತಾಯಿ, ತಂಗಿ ಹಾಗೂ ಸೊಸೆ ರಿಜ್ವಿ ಕಾಲೆಜು ಬಳಿಯಲ್ಲಿ ಹೋಗುತ್ತಿರುವಾಗ ರವೀನಾ ಅವರ ಡ್ರೈವರ್ ತನ್ನ ತಾಯಿಗೆ ಡಿಕ್ಕಿ ಹೊಡೆದಿದ್ದಾನೆʼʼ ಎಂದಿದ್ದಾರೆ.
ಚಾಲಕ ನನ್ನ ಸೊಸೆ ಮತ್ತು ನನ್ನ ತಾಯಿಯ ಮೇಲೂ ಹಲ್ಲೆ ನಡೆಸಿದ್ದಾನೆ. ನಂತರ ರವೀನಾ ಕೂಡ ಮದ್ಯದ ಅಮಲಿನಲ್ಲಿ ಹೊರಬಂದು ನನ್ನ ತಾಯಿಗೆ ಹೊಡೆದಿದ್ದರಿಂದ ಆಕೆಯ ತಲೆಗೆ ಗಂಭೀರ ಗಾಯಗಳಾಗಿವೆ. ನಾಲ್ಕು ಗಂಟೆಗಳ ಕಾಲ ಖಾರ್ ಪೊಲೀಸ್ ಠಾಣೆಯಲ್ಲಿ ಕಾಯುತ್ತಿದ್ದರೂ ಅವರ ದೂರನ್ನು ಸ್ವೀಕರಿಸುತ್ತಿಲ್ಲ . ರವೀನಾ ಪೊಲೀಸ್ ಠಾಣೆಯಲ್ಲಿ ಕೇಸ್ ಅನ್ನು ಇತ್ಯರ್ಥಪಡಿಸುವಂತೆ ನಮ್ಮಲ್ಲಿ ಮನವಿ ಮಾಡಿದರು. ಆದರೆ ನಾವು ಏಕೆ ಇತ್ಯರ್ಥಗೊಳಿಸಬೇಕು? ನನ್ನ ತಾಯಿಯ ಮೇಲೆ ಹಲ್ಲೆ ಮಾಡಲಾಗಿದೆ ಮತ್ತು ನಾನು ನ್ಯಾಯಕ್ಕಾಗಿ ಹೋರಾಡುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.
ಘಟನೆ ಕುರಿತು ರವೀನಾ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.