ಕೊಂಚ ನಿರಾಳ: ಬಡ್ಡಿ ದರ ಯಥಾಸ್ಥಿತಿ ಕಾಯ್ದುಕೊಳ್ಳಲು ಆರ್‌ಬಿಐ ನಿರ್ಧಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಹತ್ವದ ನಿರ್ಧಾರ ಕೈಗೊಂಡಿದೆ. ಬಹುತೇಕ ತಜ್ಞರ ನಿರೀಕ್ಷೆಗಳಿಗೆ ವಿರುದ್ಧವಾಗಿ ರೆಪೊ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಇದರೊಂದಿಗೆ, ರೆಪೋ ದರವು 6.50 ಶೇಕಡಾದಲ್ಲಿ ಬದಲಾಗದೆ ಮುಂದುವರಿಯುತ್ತದೆ ಎಂದು ಘೋಷಿಸಲಾಗಿದೆ. ಆರ್‌ಬಿಐನ ಇತ್ತೀಚಿನ ನಿರ್ಧಾರ ಜನಸಾಮಾನ್ಯರಿಗೆ ಕೊಂಚ ನೆಮ್ಮದಿ ನೀಡಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಗುರುವಾರ ಹಣಕಾಸು ನೀತಿ ಪರಾಮರ್ಶೆ ನಿರ್ಧಾರಗಳನ್ನು ಪ್ರಕಟಿಸಿದ್ದು, ಹಣಕಾಸು ನೀತಿ ಸಮಿತಿಯ ಆರು ಸದಸ್ಯರಲ್ಲಿ ಐವರು ಈ ನಿರ್ಧಾರವನ್ನು ಬೆಂಬಲಿಸಿದರು.

ಹಣದುಬ್ಬರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಆರ್‌ಬಿಐ ಕಳೆದೊಂದು ವರ್ಷದಿಂದ ಬಡ್ಡಿ ದರವನ್ನು ಹೆಚ್ಚಿಸುತ್ತಿದೆ. ಈ ತಿಂಗಳ 3ರಂದು ಹಣಕಾಸು ನೀತಿ ಸಭೆ ಆರಂಭವಾಗಿ ಈ ಸಭೆ ಮೂರು ದಿನಗಳ ಕಾಲ ನಡೆಯಿತು. ಆದರೆ 2023-24ರಲ್ಲಿ ಇದು ಮೊದಲ ಹಣಕಾಸು ನೀತಿ ಪರಾಮರ್ಶೆಯಾಗಿದೆ. ಹೆಚ್ಚಿನ ಹಣದುಬ್ಬರವನ್ನು ನಿಭಾಯಿಸುವ ಮಾರ್ಗವಾಗಿ ಆರ್‌ಬಿಐ ಪ್ರಮುಖ ಬಡ್ಡಿದರಗಳನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು (ಶೇ. 6.75) ಹೆಚ್ಚಿಸಲಿದೆ ಎಂದು ಅನೇಕ ತಜ್ಞರು ಭವಿಷ್ಯ ನುಡಿದಿದ್ದರು. ಆದರೆ ಅವರ ನಿರೀಕ್ಷೆಗಿಂತ ಭಿನ್ನವಾದ ನಿರ್ಧಾರವನ್ನು ಆರ್‌ಬಿಐ ಪ್ರಕಟಿಸಿದೆ. ಯಾವುದೇ ಬದಲಾವಣೆಗಳಿಲ್ಲದೆ ಶೇ.6.5ರ ದರದಲ್ಲಿ ಮುಂದುವರಿಯಲಿದೆ ಎಂದು ಘೋಷಿಸಿದೆ. ಇದರೊಂದಿಗೆ ಮತ್ತೊಮ್ಮೆ ಬಡ್ಡಿ ದರ ಏರಿಕೆಯಾಗುವ ಸಾಧ್ಯತೆ ಇಲ್ಲದಿರುವುದರಿಂದ ಶ್ರೀಸಾಮಾನ್ಯನಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.

ಹಣದುಬ್ಬರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಆರ್‌ಬಿಐ ಕಳೆದ ವರ್ಷ ಮಾರ್ಚ್‌ನಿಂದ ಬಡ್ಡಿದರಗಳನ್ನು ವೇಗವಾಗಿ ಹೆಚ್ಚಿಸುತ್ತಿದೆ. ಇದುವರೆಗೆ ರೆಪೊ ದರವನ್ನು 250 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಆರ್‌ಬಿಐ ನಿಗದಿಪಡಿಸಿದ ರೆಪೊ ದರವು ಬ್ಯಾಂಕ್ ಸಾಲದ ಮೇಲೆ ನೇರ ಪರಿಣಾಮ ಬೀರುತ್ತದೆ. ಮೂಲತಃ ರೆಪೋ ದರವು ಬ್ಯಾಂಕುಗಳು ಸಾಲ ನೀಡುವ ದರವಾಗಿದೆ. ಅದು ಕಡಿಮೆಯಾದಾಗ, ಸಾಲವು ಅಗ್ಗವಾಗುತ್ತದೆ. ಇದು ಹೆಚ್ಚಿದ ನಂತರ, ಬ್ಯಾಂಕುಗಳು ತಮ್ಮ ಸಾಲದ ಮೇಲಿನ ಬಡ್ಡಿ ದರವನ್ನು ಸಹ ಹೆಚ್ಚಿಸುತ್ತವೆ. ಎಲ್ಲಾ ರೀತಿಯ ಸಾಲಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಇಎಂಐ ಹೊರೆಯೂ ಹೆಚ್ಚಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!