ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿವೈ ಪಾಟೀಲ್ ಮೈದಾನದಲ್ಲಿ ನಡೆಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಆರ್ಸಿಬಿ ಬೌಲರ್‌ಗಳು ಮಾರಕ ದಾಳಿ ಸಂಘಟಿಸಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಸವಾಲು ಪಡೆದ ಡೆಲ್ಲಿ ತಂಡ, ಪಂದ್ಯದ ಮೊದಲ 12 ಎಸೆತಗಳಲ್ಲೇ ಬೆಚ್ಚಿಬಿದ್ದಿದೆ.
ಡೆಲ್ಲಿ ಪರ ಇನ್ನಿಂಗ್ಸ್ ಆರಂಭಿಸಿದ ಲಿಜೆಲ್ಲೆ ಲೀ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿ ಅಬ್ಬರಿಸುವ ಸೂಚನೆ ನೀಡಿದರು. ಆದರೆ ನಂತರದ ಎಸೆತದಲ್ಲೇ ಲಾರೆನ್ ಬೆಲ್ ಅವರ ಅದ್ಭುತ ಇನ್ಸ್ವಿಂಗರ್ಗೆ ಕ್ಲೀನ್ ಬೌಲ್ಡ್ ಆದರು. ಅದೇ ಓವರ್‌ನಲ್ಲಿ ಲಾರಾ ವೊಲ್ವಾರ್ಡ್ಟ್ ಕೂಡ ಖಾತೆ ತೆರೆಯುವ ಮೊದಲೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.
ಎರಡನೇ ಓವರ್ ಎಸೆಯಲು ಬಂದ ಸಯಾಲಿ ಸತ್ಘರೆ ಕೂಡ ಆರ್ಸಿಬಿಗೆ ಡಬಲ್ ಯಶಸ್ಸು ತಂದುಕೊಟ್ಟರು. ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದ ಡೆಲ್ಲಿ ನಾಯಕಿ ಜೆಮಿಮಾ ರೋಡ್ರಿಗಸ್, ಎರಡನೇ ಎಸೆತದಲ್ಲಿ ಬೌಲ್ಡ್ ಆದರು. ನಂತರ ಬಂದ ಅನುಭವಿ ಆಟಗಾರ್ತಿ ಮರಿಝನ್ನೆ ಕಪ್ ಗೋಲ್ಡನ್ ಡಕ್ (ಮೊದಲ ಎಸೆತದಲ್ಲೇ ಔಟ್) ಆಗುವ ಮೂಲಕ ಡೆಲ್ಲಿ ತಂಡವನ್ನು ಅತಂತ್ರ ಸ್ಥಿತಿಗೆ ತಳ್ಳಿದರು.
ಕೇವಲ 7 ಎಸೆತಗಳ ಅಂತರದಲ್ಲಿ 4 ಪ್ರಮುಖ ವಿಕೆಟ್ ಕಳೆದುಕೊಂಡ ಡೆಲ್ಲಿ ಕ್ಯಾಪಿಟಲ್ಸ್, 2 ಓವರ್‌ಗಳು ಮುಕ್ತಾಯವಾದಾಗ ಕೇವಲ 10 ರನ್ ಗಳಿಸಿ ತತ್ತರಿಸಿದೆ.


