ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿಸಿದ ನಾಯಕ ರಜತ್ ಪಾಟಿದಾರ್ ಇದೀಗ ಗಂಭೀರ ಗಾಯದಿಂದ ನಾಲ್ಕು ತಿಂಗಳುಗಳ ಕಾಲ ಮೈದಾನದಿಂದ ದೂರ ಉಳಿಯಬೇಕಾಗಿದೆ. ಸೌತ್ ಆಫ್ರಿಕಾ ಎ ವಿರುದ್ಧದ ಮೊತ್ತ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಎ ಪರವಾಗಿ ಆಡುತ್ತಿದ್ದ ವೇಳೆ ಅವರಿಗೆ ಈ ಗಾಯವಾಗಿದ್ದು, ವೈದ್ಯಕೀಯ ಪರೀಕ್ಷೆಯ ವರದಿ ಪ್ರಕಾರ ಗಾಯ ಗಂಭೀರವಾಗಿರುವುದಾಗಿ ದೃಢವಾಗಿದೆ.
ಈ ಗಾಯದ ಪರಿಣಾಮವಾಗಿ ಪಾಟಿದಾರ್ ರಣಜಿ ಟ್ರೋಫಿ, ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿ ಹಾಗೂ ವಿಜಯ ಹಝಾರೆ ಟೂರ್ನಿಯಿಂದ ಸಂಪೂರ್ಣವಾಗಿ ಹೊರಗುಳಿಯಲಿದ್ದಾರೆ. ಅವರು ಪ್ರಸ್ತುತ ಮಧ್ಯಪ್ರದೇಶ ತಂಡದ ನಾಯಕನಾಗಿದ್ದು, ಈಗ ಈ ಮೂರು ಪ್ರಮುಖ ಟೂರ್ನಿಗಳಿಗೂ ಹೊಸ ನಾಯಕನ ನೇಮಕಾತಿ ಅಗತ್ಯವಿದೆ ಎಂದು ಮಧ್ಯಪ್ರದೇಶ ಕ್ರಿಕೆಟ್ ಮಂಡಳಿ ತಿಳಿಸಿದೆ.
ಸದ್ಯ ರಜತ್ ಪಾಟಿದಾರ್ ಅವರಿಗೆ ಚಿಕಿತ್ಸೆ ಮುಂದುವರಿದಿದ್ದು, ನಾಲ್ಕು ತಿಂಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ. ಇದರಿಂದಾಗಿ ಅವರು ಡಿಸೆಂಬರ್‌ನಲ್ಲಿ ಆರಂಭವಾಗಲಿರುವ ವಿಜಯ ಹಝಾರೆ ಟ್ರೋಫಿಯಲ್ಲಿಯೂ ಕಣಕ್ಕಿಳಿಯುವುದಿಲ್ಲ. ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಕ್ರಿಕೆಟ್ ಮಂಡಳಿ ಹೊಸ ನಾಯಕರ ಆಯ್ಕೆ ಪ್ರಕ್ರಿಯೆ ಆರಂಭಿಸಿದೆ.
ಐಪಿಎಲ್ ಕುರಿತಂತೆ ಮಾತನಾಡುವುದಾದರೆ, ಪಾಟಿದಾರ್ ಐಪಿಎಲ್ 2026 ಸೀಸನ್‌ನಲ್ಲಿ ಆರ್‌ಸಿಬಿ ಪರವಾಗಿ ನಾಯಕನಾಗಿ ಕಣಕ್ಕಿಳಿಯಬೇಕಿತ್ತು. ಆದರೆ ಗಾಯದ ಹಿನ್ನೆಲೆ ಮಾರ್ಚ್ ವೇಳೆಗೆ ಪೂರ್ಣ ಫಿಟ್‌ನೆಸ್ ಸಾಧಿಸಿದರೆ ಮಾತ್ರ ಅವರು ಆರಂಭಿಕ ಪಂದ್ಯಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆಗದಿದ್ದರೆ, ಆರ್‌ಸಿಬಿ ತಂಡಕ್ಕೆ ಕೆಲವು ಪಂದ್ಯಗಳಲ್ಲಿ ಅವರ ಆಟ ಲಭ್ಯವಿರಲಾರದು ಎನ್ನಲಾಗಿದೆ.

