ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿನ್ನೆ ವಡೋದರಾದ ಕೋಟಂಬಿ ಸ್ಟೇಡಿಯಂನಲ್ಲಿ ನಡೆದ ಡಬ್ಲೂಪಿಎಲ್ ಫೈನಲ್ಸ್‌ನಲ್ಲಿ ಆರ್‌ಸಿಬಿ ಮಹಿಳಾ ತಂಡ ಗೆದ್ದು ಬೀಗಿ ಇತಿಹಾಸ ನಿರ್ಮಿಸಿದೆ.
ಕೋಟ್ಯಂತರ ಆರ್‌ಸಿಬಿ ಅಭಿಮಾನಿಗಳು ಈ ಗೆಲುವಿಗಾಗಿ ಕಾಯುತ್ತಿದ್ದರು. ಆರ್‌ಸಿಬಿ ಮೆನ್ ಟೀಂ ಗೆಲ್ಲುವುದಕ್ಕೂ ಮುನ್ನವೇ ಮಹಿಳಾ ತಂಡ ಗೆದ್ದು ಇತಿಹಾಸ ಸೃಷ್ಟಿಸಿತ್ತು. ಇದೀಗ ಎರಡನೇ ಬಾರಿಗೆ ಸ್ಮೃತಿ ಮಂಧಾನ ಪಡೆ ಟ್ರೋಫಿ ಎತ್ತಿ ಹಿಡಿದಿದ್ದು, ಕ್ರಿಕೆಟ್ ಪ್ರಿಯರಿಗೆ ಸಂತಸವಾಗಿದೆ. ನಿನ್ನೆ ನಡೆದ ಪಂದ್ಯ ರೋಚಕವಾಗಿತ್ತು. ಡೆಲ್ಲಿ ಕ್ಯಾಪಿಟಲ್ಸ್ ತಂಡ ಸತತ ನಾಲ್ಕು ಬಾರಿಗೆ ಫೈನಲ್ ತಲುಪಿದರೂ ಗೆಲ್ಲಲು ಸಾಧ್ಯವಾಗಿಲ್ಲ.
ಕಡೆಯ ಓವರ್‌ವರೆಗೂ ಯಾರು ಗೆಲ್ಲಬಹುದು ಎಂದು ಪ್ರೇಕ್ಷಕರು ಸೀಟ್‌ನ ತುದಿಯಲ್ಲಿ ಕುಳಿತಿದ್ದರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್ಗಳಲ್ಲಿ 203 ರನ್ಗಳ ಬೃಹತ್ ರನ್ ದಾಖಲಿಸಿತು. ಈ ಗುರಿ ಬೆನ್ನಟ್ಟಿದ ಆರ್‌ಸಿಬಿ ಕೂಡ ಕೆಚ್ಚೆದೆಯ ಪ್ರದರ್ಶನ ನೀಡಿ ಕೊನೆಯ ಓವರ್‌ನಲ್ಲಿ ಗೆಲುವು ಸಾಧಿಸಿತು. ಹಾಗೆಯೇ 203 ರನ್ಗಳ ಗುರಿ ಬೆನ್ನಟ್ಟುವ ಮೂಲಕ ಆರ್‌ಸಿಬಿ ಡಬ್ಲ್ಯುಪಿಎಲ್ ಫೈನಲ್ ಇತಿಹಾಸದಲ್ಲಿ ಅತಿದೊಡ್ಡ ಮೊತ್ತವನ್ನು ಬೆನ್ನಟ್ಟಿದ ತಂಡ ಎಂಬ ದಾಖಲೆನ್ನು ಬರೆಯಿತು.
19ನೇ ಓವರ್‌ನಲ್ಲಿ ಡೆಲ್ಲಿ, ಆರ್‌ಸಿಬಿಯನ್ನು ಸಂಕಷ್ಟಕ್ಕೆ ಸಿಲುಕಿಸಿತು. ಶೆನೆಲ್ಲೆ ಹೆನ್ರಿ ನಾಲ್ಕನೇ ಎಸೆತದಲ್ಲಿ ಸ್ಮೃತಿ ಮಂಧಾನ ಅವರನ್ನು 87 ರನ್‌ಗಳಿಗೆ ಬೌಲ್ಡ್ ಮಾಡುವ ಮೂಲಕ ಆರ್‌ಸಿಬಿಯನ್ನು ಒತ್ತಡಕ್ಕೆ ಸಿಲುಕಿಸಿದರು. ಮಂಧಾನ ಔಟಾದ ನಂತರ ಕ್ರೀಸ್‌ಗೆ ಬಂದ ರಾಧಾ ಯಾದವ್ ಮೊದಲ ಎಸೆತದಲ್ಲೇ ಕ್ಯಾಚ್ ನೀಡಿದ್ದರು. ಆದರೆ ಡೆಲ್ಲಿ ತಂಡ ಈ ಕ್ಯಾಚ್ ಕೈಚೆಲ್ಲಿ ಗೆಲ್ಲುವ ಅವಕಾಶ ಕೈಚೆಲ್ಲಿತು. ಕೊನೆಯ ಓವರ್‌ನಲ್ಲಿ ಆರ್‌ಸಿಬಿ ಗೆಲುವಿಗೆ 10 ರನ್ ಬೇಕಿತ್ತು. ಸ್ಟ್ರೈಕ್ನಲ್ಲಿದ್ದ ರಾಧಾ ಎರಡು ಬೌಂಡರಿಗಳನ್ನು ಬಾರಿಸಿ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.



