ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026 ಸೀಸನ್ ಇನ್ನೂ ದೂರದಲ್ಲಿದ್ದರೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಈಗಾಗಲೇ ಹೊಸ ಕಾಲಕ್ಕೆ ಕಾಲಿಡುತ್ತಿರುವಂತೆ ಕಾಣುತ್ತಿದೆ. ತಂಡವು ತನ್ನ ಜರ್ಸಿ ಸ್ಪಾನ್ಸರ್‌ಶಿಪ್‌ನಲ್ಲಿ ದೊಡ್ಡ ಬದಲಾವಣೆ ಮಾಡಿದ್ದು, ಲಂಡನ್ ಮೂಲದ ಟೆಕ್ ಕಂಪನಿ ‘Nothing’ ಜೊತೆ ಹೊಸ ಒಪ್ಪಂದಕ್ಕೆ ಸಹಿ ಹಾಕಿದೆ.
ಹಲವು ವರ್ಷಗಳು ಜರ್ಸಿಯ ಮುಂಭಾಗದಲ್ಲಿ ರಾರಾಜಿಸಿದ್ದ ಕತಾರ್ ಏರ್‌ವೇಸ್ ಒಪ್ಪಂದ ಮುಗಿದ ನಂತರ, ಈ ಘೋಷಣೆ ಕ್ರಿಕೆಟ್ ಅಭಿಮಾನಿಗಳಲ್ಲಿ ಹೊಸ ಕುತೂಹಲ ಹುಟ್ಟಿಸಿದೆ. ಆರ್‌ಸಿಬಿ ತನ್ನ ಎಕ್ಸ್ ಖಾತೆಯಲ್ಲಿ ವಿರಾಟ್ ಕೊಹ್ಲಿ ಹೊಸ ಜರ್ಸಿ ಧರಿಸಿರುವ ಫೋಟೊ ಹಂಚಿಕೊಂಡು, ಈ ಬದಲಾವಣೆಯನ್ನು ಅಧಿಕೃತಗೊಳಿಸಿದೆ.
ಕತಾರ್ ಏರ್‌ವೇಸ್ ಹಿಂದಿನ ಮೂರು ವರ್ಷಗಳ ಒಪ್ಪಂದಕ್ಕಾಗಿ 75 ಕೋಟಿಯ ದೊಡ್ಡ ಮೊತ್ತ ನೀಡಿದ್ದರೆ, ‘Nothing’ ಅದಕ್ಕಿಂತ ಹೆಚ್ಚಾದ ಮೊತ್ತಕ್ಕೆ ಒಪ್ಪಂದ ಮಾಡಿಕೊಂಡಿದೆ ಎಂಬ ಮಾಹಿತಿ ಹರಡುತ್ತಿದೆ. ನಿಖರ ಮೊತ್ತವನ್ನು ಇನ್ನೂ ಬಹಿರಂಗಪಡಿಸದಿದ್ದರೂ, ಐಪಿಎಲ್ ಮಾರುಕಟ್ಟೆಯಲ್ಲಿ ಇದು ಅತ್ಯಂತ ದೊಡ್ಡ ಜರ್ಸಿ ಸ್ಪಾನ್ಸರ್ ಡೀಲ್ ಆಗಿರಬಹುದು ಎಂಬ ಊಹೆಗಳು ಜೋರಾಗಿವೆ.
ಈ ನಡುವೆ, ಆರ್‌ಸಿಬಿ ಇನ್ನೊಂದು ಸವಾಲಿನತ್ತ ಮುಖ ಮಾಡುತ್ತಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಸುರಕ್ಷತಾ ವಿವಾದಗಳ ಕಾರಣ, 2026ರ ಐಪಿಎಲ್‌ನಲ್ಲಿ ತಂಡವು ತನ್ನ ತವರು ಪಂದ್ಯಗಳನ್ನು ಪುಣೆಯಲ್ಲಿ ಆಡಬೇಕಾದ ಪರಿಸ್ಥಿತಿ ಎದುರಾಗಬಹುದು. ಮಹಿಳಾ ವಿಶ್ವಕಪ್ ಮತ್ತು ಟಿ20 ವಿಶ್ವಕಪ್ ಆತಿಥ್ಯ ಪಟ್ಟಿಯಿಂದ ಬೆಂಗಳೂರನ್ನು ಕೈಬಿಟ್ಟಿರುವುದು ಈ ಆತಂಕಕ್ಕೆ ಕಾರಣವಾಗಿದೆ.
ಹೊಸ ಸ್ಪಾನ್ಸರ್, ಹೊಸ ನೆಲೆ ಮತ್ತು ಹೊಸ ತಂಡದೊಂದಿಗೆ ಆರ್‌ಸಿಬಿ ಮತ್ತೊಮ್ಮೆ ಹೊಸ ಆರಂಭದ ಹೆಜ್ಜೆ ಹಾಕುತ್ತಿದೆ.

