Monday, December 1, 2025

ಟಿ10 ಲೀಗ್‌ನಲ್ಲಿ RCB​ ಮ್ಯಾಜಿಕ್: ಶೆಫರ್ಡ್, ಸಾಲ್ಟ್, ಡೇವಿಡ್ ಕೈಯಲ್ಲಿ ಮತ್ತೊಂದು ಟ್ರೋಫಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯನ್ ಪ್ರೀಮಿಯರ್ ಲೀಗ್ ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರಾದ ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್ ಮತ್ತು ಫಿಲ್ ಸಾಲ್ಟ್ ಅವರು ಇದೀಗ ಒಟ್ಟಾಗಿ ಮತ್ತೊಂದು ಪ್ರತಿಷ್ಠಿತ ಟ್ರೋಫಿ ಎತ್ತಿ ಹಿಡಿದು ಸಂಭ್ರಮಿಸಿದ್ದಾರೆ. ಇವರು ಐಪಿಎಲ್‌ನ ಹೊರತಾಗಿ ಒಟ್ಟಿಗೆ ಕಣಕ್ಕಿಳಿದು ಚಾಂಪಿಯನ್‌ಶಿಪ್ ಗೆದ್ದಿರುವುದು ವಿಶೇಷ.

ಆರ್​ಸಿಬಿ ತಂಡದ ಈ ಮೂವರು ಆಟಗಾರರು ಅಬುಧಾಬಿ ಟಿ10 ಲೀಗ್‌ನಲ್ಲಿ ಯುಎಇ ಬುಲ್ಸ್ ಪರ ಆಡಿದ್ದರು. ಈ ತಂಡಕ್ಕೆ ಆರ್​ಸಿಬಿ ತಂಡದ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಅವರೇ ಮಾರ್ಗದರ್ಶಕರಾಗಿರುವುದು ಈ ಜಯದ ಮುಖ್ಯಾಂಶವಾಗಿದೆ. ಕೋಚ್ ಫ್ಲವರ್ ಅವರ ಗರಡಿಯಲ್ಲಿ ತಯಾರಾದ ಯುಎಇ ಬುಲ್ಸ್ ತಂಡವು ಅಬುಧಾಬಿ ಟಿ10 ಲೀಗ್​ನ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಭಾನುವಾರ ನಡೆದ ಫೈನಲ್ ಕದನದಲ್ಲಿ ಯುಎಇ ಬುಲ್ಸ್ ತಂಡದ ಆಟಗಾರರು ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 10 ಓವರ್​ಗಳಲ್ಲಿ ಬರೋಬ್ಬರಿ 150 ರನ್​ಗಳ ಬೃಹತ್ ಮೊತ್ತವನ್ನು ಪೇರಿಸಿದರು. ಈ ಕಠಿಣ ಗುರಿ ಬೆನ್ನತ್ತಿದ ಎದುರಾಳಿ ಅಸ್ಪಿನ್ ಸ್ಟಾಲಿನ್ಸ್ ತಂಡವು ಯುಎಇ ಬುಲ್ಸ್‌ನ ಮಾರಕ ಬೌಲಿಂಗ್ ಮತ್ತು ಕ್ಷೇತ್ರರಕ್ಷಣೆಯ ಮುಂದೆ ತತ್ತರಿಸಿ ಕೇವಲ 70 ರನ್​ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಯುಎಇ ಬುಲ್ಸ್ ತಂಡವು 80 ರನ್​ಗಳ ಭರ್ಜರಿ ಜಯ ದಾಖಲಿಸಿ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿತು.

ವಿಜಯದ ನಂತರ, ಯಶಸ್ವಿ ಕೋಚ್ ಆ್ಯಂಡಿ ಫ್ಲವರ್ ಅವರು ಟ್ರೋಫಿಯೊಂದಿಗೆ ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್ ಮತ್ತು ಫಿಲ್ ಸಾಲ್ಟ್ ಅವರೊಂದಿಗೆ ಫೋಟೋಗೆ ಪೋಸ್ ನೀಡಿ ಸಂತಸ ಹಂಚಿಕೊಂಡರು. ಈ ಗೆಲುವು, ಐಪಿಎಲ್‌ನಲ್ಲಿ ಚಾಂಪಿಯನ್ ಆದ ನಂತರ ಆರ್​ಸಿಬಿ ತಂಡದ ಆಟಗಾರರು ಇತರ ಲೀಗ್‌ಗಳಲ್ಲಿಯೂ ತಮ್ಮ ಪ್ರಾಬಲ್ಯ ಮೆರೆದಿದ್ದಾರೆ ಎಂಬುದನ್ನು ಸಾಬೀತುಪಡಿಸಿದೆ.

error: Content is protected !!