ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಆದೇಶದ ಮೇರೆಗೆ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಗೆ ಆರ್‌ಸಿಬಿ ಆಯೋಜಕರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆರ್‌ಸಿಬಿಯ ಮಾರ್ಕೆಟಿಂಗ್ ಮುಖ್ಯಸ್ಥರಾದ ನಿಖಿಲ್ ಸೋಸಲೆ ಅವರನ್ನ ಬಂಧಿಸಲಾಗಿದೆ. ಇದನ್ನು ಪ್ರಶ್ನಿಸಿ ನಿಖಿಲ್ ಸೋಸಲೆ ಅವರ ಪತ್ನಿ ಮಾಳವಿಕಾ ನಾಯ್ಕ್ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಬಂಧನಕ್ಕೆ ತಡೆ ನೀಡುವಂತೆ ಅರ್ಜಿ ಮೂಲಕ ಹೈಕೋರ್ಟ್ ಗೆ ಮನವಿ ಮಾಡಿದ್ದಾರೆ.
ಸಿಎಂ ಆದೇಶಾನುಸಾರ ತಮ್ಮ ಪತಿಯನ್ನ ಕಾನೂನುಬಾಹಿರವಾಗಿ ಬಂಧನ ಮಾಡಲಾಗಿದೆ ಎಂದು ನಿನ್ನೆಯ (ಜೂನ್ 05) ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ಆಧಾರವಾಗಿಸಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ತನಿಖೆಯನ್ನೇ ನಡೆಸದೇ ಸಿಎಂ ಆದೇಶಾನುಸಾರ ಬಂಧಿಸಲಾಗಿದೆ. ಕಾನೂನು, ಸಂವಿಧಾನ ಕಡೆಗಣಿಸಿ ಬಂಧಿಸಲಾಗಿದ್ದು, ಈ ಮೂಲಕ ನಿಖಿಲ್ ಸೋಸಲೆಯ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ಅಲ್ಲದೇ ಚಿನ್ನಸ್ವಾಮಿ ಸ್ಟೇಡಿಯಂನ ಸಂಭ್ರಮಾಚರಣೆಯಲ್ಲಿ ಡಿಸಿಎಂ ಭಾಗಿಯಾಗಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಆನ್‌ಲೈನ್ ಮೂಲಕ ಉಚಿತ ಪಾಸ್ ವ್ಯವಸ್ಥೆ ಮಾಡಲಾಗಿತ್ತು. ಪಾಸ್ ಇದ್ದವರಿಗಷ್ಟೇ ಚಿನ್ನಸ್ವಾಮಿ ಸ್ಟೇಡಿಯಂಗೆ ಪ್ರವೇಶವಿತ್ತು. ಆಟಗಾರರನ್ನು ವಿಮಾನ ನಿಲ್ದಾಣದಲ್ಲಿ ಖುದ್ದು ಡಿಸಿಎಂ ಸ್ವಾಗತಿಸಿದ್ದರು. ವಿಧಾನಸೌಧದಲ್ಲಿ ಸರ್ಕಾರ, ಸಿಎಂ, ಡಿಸಿಎಂ ಸನ್ಮಾನಿಸಿದ್ದರು. ನಂತರ ಚಿನ್ನಸ್ವಾಮಿ ಸ್ಟೇಡಿಯಂನ ಸಂಭ್ರಮಾಚರಣೆಯಲ್ಲಿ ಡಿಸಿಎಂ ಭಾಗಿಯಾಗಿದ್ದರು. ಅವಘಡ ಮಾಹಿತಿ ತಿಳಿದ ತಕ್ಷಣ ಆರ್‌ಸಿಬಿಯಿಂದ ಕಾರ್ಯಕ್ರಮ ಸ್ಥಗಿತ ಮಾಡಲಾಗಿತ್ತು. ಹೀಗಾಗಿ ಯಾವುದೇ ಲೋಪವೆಸಗಿಲ್ಲ. ಹೀಗಾಗಿ ನಿಖಿಲ್ ಸೋಸಲೆ ಬಂಧನಕ್ಕೆ ತಡೆ ನೀಡುವಂತೆ ಪತ್ನಿ ಮಾಳವಿಕಾ ನಾಯ್ಕ್ ರಿಟ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.