ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2025 ರಲ್ಲಿ ತಮ್ಮ ದಿಟ್ಟ ಬೌಲಿಂಗ್ ಮೂಲಕ ಗಮನ ಸೆಳೆದಿದ್ದ ಆರ್‌ಸಿಬಿಯ ಯುವ ಬೌಲರ್ ಯಶ್ ದಯಾಳ್ ಈಗ ಕ್ರಿಕೆಟ್ ಹೊರತು ಪಡಿಸಿ ಮತ್ತೊಂದು ವಿಷಯಕ್ಕೆ ಸುದ್ದಿಯಲ್ಲಿದ್ದಾರೆ. ಈಗ ಇವರ ಕುರಿತು ಇರುವ ಪ್ರಕರಣವೊಂದು ಇದೀಗ ದೊಡ್ಡ ವಿವಾದದ ರೂಪ ಪಡೆದುಕೊಂಡಿದ್ದು, ದಯಾಳ್ ಮೇಲೆ ಗಂಭೀರ ಆರೋಪಗಳು ಕೇಳಿಬಂದಿವೆ.
ಗಾಜಿಯಾಬಾದ್‌ನ ಯುವತಿಯೊಬ್ಬರು ಯಶ್ ದಯಾಳ್ ವಿರುದ್ಧ ಪೊಲೀಸರಿಗೆ ನೀಡಿರುವ ದೂರಿನಲ್ಲಿ, ಇಬ್ಬರ ನಡುವೆ ಐದು ವರ್ಷಗಳಿಂದ ಪ್ರೀತಿ ಸಂಬಂಧವಿದ್ದು, ದಯಾಳ್ ತಾನು ಆಕೆಯ ಗಂಡನೆಂದು ನಂಬಿಸಿ, ತಮ್ಮ ಕುಟುಂಬಕ್ಕೂ ಪರಿಚಯಿಸಿದ್ದಾನೆ ಎಂದು ಉಲ್ಲೇಖಿಸಿದ್ದಾರೆ. ಈ ಭರವಸೆಯ ಮೇಲೆ ಸಂಪೂರ್ಣ ನಂಬಿಕೆ ಇಟ್ಟಿದ್ದ ಯುವತಿ, ಜೀವನದ ಎಲ್ಲ ಬೆಳವಣಿಗೆಗಳನ್ನು ಶೇರ್ ಮಾಡಿಕೊಂಡಿದ್ದರು. ಆದರೆ ಮದುವೆ ಕುರಿತ ಪ್ರಶ್ನೆಗಳಿಗೆ ದಯಾಳ್ ಉತ್ತರಿಸದೆ ತಪ್ಪಿಸಿಕೊಳ್ಳುತ್ತಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ದೈಹಿಕವಾಗಿ ಹಲ್ಲೆ ಮಾಡಿ ಮಾನಸಿಕವಾಗಿ ಪೀಡಿಸಿದ್ದರು ಎನ್ನಲಾಗಿದೆ. ಅಲ್ಲದೇ ಆರ್ಥಿಕವಾಗಿ ಕೂಡ ಶೋಷಣೆ ನಡೆದಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಕೇವಲ ತನ್ನೊಂದಿಗೆ ಮಾತ್ರವಲ್ಲದೆ, ಇನ್ನೂ ಹಲವು ಯುವತಿಯರೊಂದಿಗೆ ದಯಾಳ್ ಮದುವೆಯ ಭರವಸೆ ನೀಡಿ ಸಂಬಂಧ ಬೆಳೆಸಿದ್ದನ್ನು ಯುವತಿ ಅರಿತುಕೊಂಡಿದ್ದು, ನಂತರ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಆರೋಪಗಳಿಗೆ ಪೂರಕವಾಗಿ ಚಾಟ್ ರೆಕಾರ್ಡ್‌ಗಳು, ಫೋಟೋಗಳು ಮತ್ತು ವಿಡಿಯೋ ಕಾಲ್‌ಗಳಂತಹ ಸಾಕ್ಷ್ಯಗಳನ್ನು ಕೂಡ ಪೊಲೀಸ್ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ.
ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಗೆ ಜೂನ್ 14ರಂದು ದೂರು ನೀಡಿದರೂ ಯಾವುದೇ ಸ್ಪಷ್ಟ ಕ್ರಮವಾಗದ ಕಾರಣ, ಯುವತಿ ನೇರವಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಕಚೇರಿಯ ಮೊರೆ ಹೋಗಿದ್ದಾಳೆ. ಸಿಎಂ ಕಚೇರಿ ಕೂಡ ಪ್ರಕರಣದ ಗಂಭೀರತೆಯನ್ನು ಗಮನಿಸಿ, ಗಾಜಿಯಾಬಾದ್ ಪೊಲೀಸರಿಗೆ ತಕ್ಷಣ ತನಿಖೆ ನಡೆಸಿ ಜುಲೈ 21ರೊಳಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ. ಕ್ರಿಕೆಟ್‌ನಲ್ಲಿ ಪ್ರಭಾವ ಬೀರುವ ಮಟ್ಟಿಗೆ ಮಿಂಚಿದ ಯಶ್ ದಯಾಳ್, ಈ ಗಂಭೀರ ಆರೋಪಗಳ ಕುರಿತಂತೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಪ್ರಕರಣ ಯಾವ ತಿರುವು ತಗೆದುಕೊಳ್ಳುತ್ತದೆ ಎಂಬುದನ್ನು ಮುಂದೆ ತಿಳಿಯಬೇಕಿದೆ.