ಐಪಿಎಲ್ ನಂತೆ ಟ್ರೋಫಿ ಗೆಲ್ಲಿಸಿಕೊಟ್ಟ RCB ಸ್ಟಾರ್! ಸಿಕ್ಸರ್ ಮೂಲಕವೇ ಪಂದ್ಯ ಫಿನಿಷ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ (VCA) ಸ್ಟೇಡಿಯಂನಲ್ಲಿ ನಡೆದ ವಿದರ್ಭ ಪ್ರೊ ಟಿ20 ಲೀಗ್‌ ಫೈನಲ್‌ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರ ಜಿತೇಶ್ ಶರ್ಮಾ ಅವರ ಅದ್ಭುತ ಪ್ರದರ್ಶನ ತಂಡದ ಗೆಲುವಿಗೆ ಕಾರಣವಾಯಿತು. ತಮ್ಮ ಉತ್ತಮ ಆಟದ ಮೂಲಕ ಅವರು ನೆಕೊ ಮಾಸ್ಟರ್ ಬ್ಲಾಸ್ಟರ್ಸ್ ತಂಡವನ್ನು ಮೊದಲ ಬಾರಿಗೆ ಚಾಂಪಿಯನ್ ಆಗುವಂತೆಯೂ ಮಾಡಿದರು.

ಪಗರಿಯಾ ಸ್ಟ್ರೈಕರ್ಸ್ ನೀಡಿದ 179 ರನ್‌ಗಳ ಗುರಿಯನ್ನು ಬೆನ್ನತ್ತಿದ ನೆಕೊ ತಂಡ, ಜಿತೇಶ್ ಶರ್ಮಾ ಅವರ 11 ಎಸೆತಗಳಲ್ಲಿ 30 ರನ್‌ಗಳ ಅಜೇಯ ಇನ್ನಿಂಗ್ಸ್‌ ನೆರವಿನಿಂದ 7 ವಿಕೆಟ್‌ಗಳಿಂದ ಜಯ ಗಳಿಸಿತು. ಕೊನೆಯ ಹಂತದಲ್ಲಿ ಎಂಎಸ್ ಧೋನಿ ಶೈಲಿಯಲ್ಲಿ ಸಿಕ್ಸರ್ ಬಾರಿಸಿ ವಿನ್ನಿಂಗ್ ಶಾಟ್ ನೀಡಿದ ಜಿತೇಶ್, ಅಭಿಮಾನಿಗಳ ಮನ ಗೆದ್ದರು. ಈ ರೋಚಕ ಕ್ಷಣದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಪಗರಿಯಾ ಸ್ಟ್ರೈಕರ್ಸ್ ಪರವಾಗಿ ಶಿವಂ ದೇಶಮುಖ್ 45 ಎಸೆತಗಳಲ್ಲಿ 82 ರನ್‌ಗಳ ಆಕರ್ಷಕ ಇನ್ನಿಂಗ್ಸ್ ಆಡಿದರು. ತಂಡ 178/7 ರನ್‌ಗಳನ್ನು ಗಳಿಸಿತು. ನೆಕೊ ತಂಡದ ಬೌಲರ್ ಸನ್ಮೇಷ್ ದೇಶಮುಖ್ 3 ವಿಕೆಟ್‌ಗಳನ್ನು ಪಡೆದು ಪಂದ್ಯವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡಿದರು.

ಗುರಿ ಬೆನ್ನಟ್ಟುವ ಸಂದರ್ಭದಲ್ಲಿ ವೇದಾಂತ್ ದಿಘಾಡೆ 52 ಎಸೆತಗಳಲ್ಲಿ 80 ರನ್‌, ಆದ್ಯಾನ್ ದಗಾ 22 ರನ್‌, ಮತ್ತು ಆರ್ಯನ್ ಮೆಶ್ರಾಮ್ 26 ಎಸೆತಗಳಲ್ಲಿ 42 ರನ್‌ಗಳ ಜೊತೆಯಾಟ ನೀಡಿದರು. ಅಂತಿಮವಾಗಿ 14 ಎಸೆತಗಳಲ್ಲಿ 6 ರನ್ ಬೇಕಾಗಿದ್ದಾಗ ಕ್ರೀಸ್‌ಗೆ ಬಂದ ಜಿತೇಶ್ ಶರ್ಮಾ, ಸಿಕ್ಸರ್ ಮೂಲಕ ತಂಡವನ್ನು ಗೆಲುವಿಗೆ ಕರೆದೊಯ್ದರು.

ಈ ಟೂರ್ನಮೆಂಟ್‌ನಲ್ಲಿ ಜಿತೇಶ್ ಶರ್ಮಾ ಅವರ ಪ್ರದರ್ಶನ ಶ್ಲಾಘನೀಯವಾಗಿತ್ತು. ಸೆಮಿಫೈನಲ್‌ ಪಂದ್ಯದಲ್ಲಿಯೂ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ತಂಡವನ್ನು ಫೈನಲ್‌ಗೆ ತಲುಪಿಸಿದ್ದರು. ಐಪಿಎಲ್ 2025ರಲ್ಲಿ RCB ಪರವಾಗಿ ಅವರು 15 ಪಂದ್ಯಗಳಲ್ಲಿ 261 ರನ್ ಗಳಿಸಿ, 176.35 ಸ್ಟ್ರೈಕ್ ರೇಟ್‌ ಮೂಲಕ ಗಮನ ಸೆಳೆದಿದ್ದರು.

ಈ ಸಾಧನೆ ಜಿತೇಶ್‌ರನ್ನು ಟೀಂ ಇಂಡಿಯಾದ ಟಿ-20 ಆಯ್ಕೆಗೆ ಇನ್ನಷ್ಟು ಹತ್ತಿರ ಮಾಡಿದಂತಾಗಿದೆ. ಬಾಂಗ್ಲಾದೇಶ ವಿರುದ್ಧ ಆಗಸ್ಟ್‌ನಲ್ಲಿ ನಡೆಯಲಿರುವ ಟಿ-20 ಸರಣಿಗೆ ಅವರ ಹೆಸರು ಗಂಭೀರ ಚರ್ಚೆಯಲ್ಲಿದೆ. ಕೇವಲ ಒಂದು ತಿಂಗಳಲ್ಲಿ ಎರಡು ಪ್ರಮುಖ ಟ್ರೋಫಿಗಳನ್ನು ಗೆದ್ದು ಕ್ರಿಕೆಟ್ ಜಗತ್ತಿನಲ್ಲಿ ತಮ್ಮದೇ ಆದ ಬಲಿಷ್ಠ ಸ್ಥಾನವನ್ನು ಜಿತೇಶ್ ಶರ್ಮಾ ಹೊಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!