February 19, 2026
Thursday, February 19, 2026
spot_img

ರಣಜಿ ಫೈನಲ್ ಫೈಟ್‌ಗೆ ರೆಡಿ: ಉತ್ತರಾಖಂಡ್ ಸದ್ದಡಗಿಸಿ ಪ್ರಶಸ್ತಿ ಸುತ್ತಿಗೆ ಕರ್ನಾಟಕ ಲಗ್ಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಕಾನ ಕ್ರೀಡಾಂಗಣದಲ್ಲಿ ನಡೆದ ಉತ್ತರಾಖಂಡ್ ವಿರುದ್ಧದ ಸೆಮಿಫೈನಲ್ ಹಣಾಹಣಿ ಡ್ರಾನಲ್ಲಿ ಅಂತ್ಯಗೊಂಡರೂ, ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ 503 ರನ್‌ಗಳ ಬೃಹತ್ ಮುನ್ನಡೆಯ ಆಧಾರದ ಮೇಲೆ ಕರ್ನಾಟಕ ಫೈನಲ್‌ಗೆ ಪ್ರವೇಶಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ, ರನ್ ಶಿಖರವನ್ನೇ ನಿರ್ಮಿಸಿತು. ಆರಂಭಿಕ ಆಟಗಾರ ಕೆ.ಎಲ್ ರಾಹುಲ್ (141) ಆಕರ್ಷಕ ಶತಕ ಸಿಡಿಸಿದರೆ, ನಾಯಕ ದೇವದತ್ ಪಡಿಕ್ಕಲ್ (232) ದ್ವಿಶತಕದ ಅಬ್ಬರ ಪ್ರದರ್ಶಿಸಿದರು. ಮಧ್ಯಮ ಕ್ರಮಾಂಕದಲ್ಲಿ ಸ್ಮರಣ್ ರವಿಚಂದ್ರನ್ (135) ಮಿಂಚಿದರೆ, ಕೃತಿಕ್ ಕೃಷ್ಣ (60) ಮತ್ತು ವಿದ್ಯಾಧರ್ ಪಾಟೀಲ್ (54) ಉಪಯುಕ್ತ ರನ್ ಸೇರಿಸಿದರು. ಇದರ ಫಲವಾಗಿ ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 736 ರನ್‌ಗಳ ಬೃಹತ್ ಮೊತ್ತ ಪೇರಿಸಿತು.

ಬೃಹತ್ ಮೊತ್ತವನ್ನು ಬೆನ್ನಟ್ಟಿದ ಉತ್ತರಾಖಂಡ್ ಮೊದಲ ಇನಿಂಗ್ಸ್‌ನಲ್ಲಿ ಕೇವಲ 233 ರನ್‌ಗಳಿಗೆ ಸರ್ವಪತನ ಕಂಡಿತು. 503 ರನ್‌ಗಳ ಮುನ್ನಡೆ ಪಡೆದರೂ ಫಾಲೋ-ಆನ್ ನೀಡದ ಕರ್ನಾಟಕ ದ್ವಿತೀಯ ಇನಿಂಗ್ಸ್ ಆರಂಭಿಸಿತು. ಎರಡನೇ ಇನಿಂಗ್ಸ್‌ನಲ್ಲಿ ಸ್ಮರಣ್ ರವಿಚಂದ್ರನ್ (127) ಮತ್ತೊಮ್ಮೆ ಶತಕ ಸಿಡಿಸಿದರೆ, ಕೆ.ಎಲ್ ರಾಹುಲ್ (86) ಹಾಗೂ ಕೃತಿಕ್ ಕೃಷ್ಣ (52) ನೆರವಿನಿಂದ ತಂಡ 323 ರನ್ ಗಳಿಸಿತು.

ಅಂತಿಮವಾಗಿ ಉತ್ತರಾಖಂಡ್‌ಗೆ 827 ರನ್‌ಗಳ ಅಸಾಧ್ಯ ಗುರಿ ನೀಡಲಾಯಿತು. ಐದನೇ ದಿನದಾಟದ ಅಂತ್ಯಕ್ಕೆ ಉತ್ತರಾಖಂಡ್ 260 ರನ್ ಗಳಿಸಿದ್ದಾಗ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು. ನಿಯಮದಂತೆ ಮೊದಲ ಇನಿಂಗ್ಸ್ ಮುನ್ನಡೆ ಪಡೆದ ಕರ್ನಾಟಕ ಜಯಭೇರಿ ಬಾರಿಸಿತು. ಫೆಬ್ರವರಿ 24 ರಿಂದ ಆರಂಭವಾಗಲಿರುವ ಮಹತ್ವದ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವು ಜಮ್ಮು-ಕಾಶ್ಮೀರ ತಂಡವನ್ನು ಎದುರಿಸಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !