ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರಿನ ಜೆರೋಸಾ ಶಾಲೆ ಶಿಕ್ಷಕಿ ಹಿಂದು ದೇವರನ್ನು ಅವಹೇಳನ ಮಾಡಿರುವ ಪ್ರಕರಣದಲ್ಲಿ ತನ್ನ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಬಗ್ಗೆ ಗುರುವಾರ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಘಟನೆಯಾದ ಮೂರನೇ ದಿನಕ್ಕೆ ಹೆತ್ತವರು ಮತ್ತು ಸ್ಥಳೀಯರು ಪ್ರತಿಭಟನೆ ಮಾಡಿದ್ದರು. ಸ್ಥಳೀಯ ಶಾಸಕನಾಗಿ ನನ್ನನ್ನು ಕರೆದಾಗ ನಾನು ತೆರಳಿದ್ದೇನೆ. ಅದಕ್ಕೂ ಮುನ್ನ ಆಡಳಿತ ಮಂಡಳಿಯವರನ್ನು ಕರೆದರೂ ಅವರು ಬರಲಿಲ್ಲ. ನಾನು ಅಲ್ಲಿಗೆ ಹೋಗಿ ಶಿಕ್ಷಕಿ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಹೇಳಿದ್ದೇನೆ. ಮುಖ್ಯಸ್ಥರಿಗೆ ಒತ್ತಡ ಹಾಕಿ ಎಂದು ಘಂಟಾಘೋಷವಾಗಿ ಹೇಳಿದ್ದೇನೆ. ಶಾಲೆಯ ಹೊರಗೆ ಪ್ರತಿಭಟನೆ ಮಾಡಬಾರದು ಎಂದು ಕಾನೂನಿಲ್ಲ. ಪ್ರತಿಭಟಿಸಿದರು ಎಂದು ಕೇಸ್ ಮಾಡುವುದಾದರೆ, ಕಾಂಗ್ರೆಸ್ ನಿಲುವು ಏನು ಎಂಬುದು ಅರ್ಥವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಹಿಟ್ಲರ್ ಮಾನಸಿಕತೆಯನ್ನು ಅಳವಡಿಸಿಕೊಂಡಿದೆ. ಪ್ರತಿಭಟನೆ ನಡೆಸಿರುವುದಕ್ಕೆ ನನ್ನನ್ನು ಎ೧ ಆರೋಪಿ ಎಂದು ಮಾಡಿರುವುದು ಹಿಟ್ಲರ್ ರಾಜಕಾರಣ. ನನಗೆ ಪ್ರತಿಭಟನೆ, ಎಫ್‌ಐಆರ್ ಯಾವುದೂ ಹೊಸತಲ್ಲ. ಆದರೆ ರಾಮನ ವಿರುದ್ಧ ಯಾರೇ ಮಾತನಾಡಿದರೂ ನಾನು ಬಿಡುವುದಿಲ್ಲ. ಶಾಸಕ ಸ್ಥಾನ ಇವತ್ತು ಇರುತ್ತದೆ, ನಾಳೆ ಹೋಗಬಹುದು. ಆದರೆ ನನ್ನ ದೇವರಿಗೆ ಅವಮಾನ ಆದಾಗ ಸುಮ್ಮನೆ ಕೂರುವುದಿಲ್ಲ. ಇದಕ್ಕೆ ನನಗೆ ಯಾರೂ, ಯಾವುದೇ ಸರ್ಟಿಫಿಕೆಟ್ ಕೊಡುವ ಅವಶ್ಯಕತೆ ಇಲ್ಲ ಎಂದು ಶಾಸಕ ಕಾಮತ್ ಪ್ರತಿಕ್ರಿಯಿಸಿದರು.
ಪ್ರತಿಭಟಿಸುವುದು ಸಂವಿಧಾನದಲ್ಲಿ ನೀಡಿದ ಹಕ್ಕು. ಸಾಂವಿಧಾನಿಕ ಅಕಾರವನ್ನು ಮೊಟಕುಗೊಳಿಸಿ ಹಿಟ್ಲರ್ ಆಡಳಿತವನ್ನು ಸರ್ಕಾರ ಮಾಡುತ್ತಿದೆ. ಅಲ್ಲಿನ ಪೋಷಕರು ಠಾಣೆಗೆ ದೂರು ನೀಡಿದರೂ ಇದುವರೆಗೆ ಕೇಸು ದಾಖಲಿಸಿಲ್ಲ. ಶಿಕ್ಷಕಿ ಹಿಂದು ದೇವರ ವಿರುದ್ಧ ಮಾತನಾಡಿದರೂ ಕೇಸು ಮಾಡಿಲ್ಲ. ಡಿಡಿಪಿಐ ತನಿಖೆ ಮಾಡುವ ಅಕಾರಿಯಾಗಿದ್ದು, ಅವರನ್ನು ವರ್ಗಾವಣೆ ಮಾಡಿದ್ದಾರೆ. ಅವರು ತನಿಖೆ ನಡೆಸಿದರೆ ಸತ್ಯಾಸತ್ಯತೆ ಹೊರ ಬರುತ್ತದೆ ಎಂದು ಅವರನ್ನೇ ವರ್ಗಾವಣೆಗೊಳಿಸಿದ್ದಾರೆ ಎಂದರು.