ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾತಿಗಣತಿ ವರದಿಯನ್ನು (Census Report) ನಮ್ಮ ಸರ್ಕಾರ ಸ್ವೀಕಾರ ಮಾಡಲಿದೆ. ಜಾತಿಗಣತಿ ವರದಿ ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಸಲ್ಲಿಕೆಯಾಗಲಿದ್ದು, ಅದನ್ನು ಸ್ವೀಕರಿಸಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಪುನರುಚ್ಛಾರ ಮಾಡಿದ್ದಾರೆ.
ಕಾಳಿದಾಸ ಹೆಲ್ತ್ ಅಂಡ್ ಎಜುಕೇಶನ್ ಟ್ರಸ್ಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಡೀ ದೇಶದಲ್ಲಿ ಜಾತಿಗಣತಿ ಮೊದಲು ಮಾಡಿದ್ದು ನಮ್ಮ ಸರ್ಕಾರ. ನಿಖರವಾಗಿ ಪ್ರತಿ ಜಾತಿಗಳ ಆರ್ಥಿಕ, ಸಾಮಾಜಿಕ, ಆರ್ಥಿಕ ಸ್ಥಿತಿ ತಿಳಿಯುವ ಉದ್ದೇಶದಿಂದ ಜಾತಿ ಜನಗಣತಿ ಮಾಡಿಸಿದ್ದೆ. ಇದಕ್ಕಾಗಿ 165 ಕೋಟಿ ರೂ. ಖರ್ಚು ಮಾಡಿದ್ದೆವು ಎಂದು ತಿಳಿಸಿದರು.
ಜಾತಿ ಗಣತಿ ವರದಿ ನಾನು ಇದ್ದಾಗ ಬಂದಿರಲಿಲ್ಲ. ನಾನು ಹೋದ ಮೇಲೆ ಯಡಿಯೂರಪ್ಪ, ಕುಮಾರಸ್ವಾಮಿ, ಬೊಮ್ಮಾಯಿ ಬಂದರೂ ಅವರು ವರದಿ ಬಿಡುಗಡೆ ಮಾಡಿಲ್ಲ. ಕುಮಾರಸ್ವಾಮಿ (HD Kumaraswamy) ಸಮಯದಲ್ಲಿ ವರದಿ ರೆಡಿ ಆಗಿದೆ. ಅಂದಿನ ಸಚಿವ ಪುಟ್ಟರಂಗಶೆಟ್ಟಿ ವರದಿ ತೆಗೆದುಕೊಳ್ಳೋಕೆ ರೆಡಿ ಇದ್ದರು. ಆದರೆ ಕುಮಾರಸ್ವಾಮಿ ವರದಿ ತೆಗೆದುಕೊಳ್ಳಬೇಡ ಎಂದು ಹೆದರಿಸಿದರು. ಅದಕ್ಕೆ ಪುಟ್ಟರಂಗಶೆಟ್ಟಿ ವರದಿ ಪಡೆಯಲಿಲ್ಲ ಎಂದು ಕುಮಾರಸ್ವಾಮಿ ಮೇಲೆ ಆರೋಪ ಮಾಡಿದರು.
ಈಗ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಜನವರಿಯಲ್ಲಿ ವರದಿ ಕೊಡುತ್ತೇನೆ ಎಂದು ಹೇಳಿದ್ದಾರೆ. ಅ ವರದಿಯನ್ನು ಸ್ವೀಕಾರ ಮಾಡುತ್ತೇನೆ. ಜಾತಿ ಗಣತಿ ಅತ್ಯಂತ ಮುಖ್ಯವಾಗಿದ್ದು, ಜಾತಿ ಗಣತಿ ವರದಿ ಸ್ವೀಕಾರ ಮಾಡುವುದಾಗಿ ಘೋಷಣೆ ಮಾಡಿದರು.