ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಲಿವುಡ್ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರ ‘ಆಪನ್ಹೈಮರ್’ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ವಿಶ್ವದಾದ್ಯಂತ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ವಿಮರ್ಶಕರು ಕೂಡ ಹಾಲಿವುಡ್ನ ಈ ಚಿತ್ರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆದ್ರೆ ಈ ಖುಷಿ ನಡುವೆ ಸಿನಿಮಾದಲ್ಲಿನ ಒಂದು ದೃಶ್ಯಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ.
ಹೌದು, ಸಿನಿಮಾದಲ್ಲಿ ಲೈಂಗಿಕ ಕ್ರಿಯೆ ನಡೆಸುವಾಗ ಕಥಾನಾಯಕ ಭಗವದ್ಗೀತೆಯ ಸಾಲುಗಳನ್ನು ಓದುವ ದೃಶ್ಯ ಸಿನಿಮಾದಲ್ಲಿದೆ. ಇದಕ್ಕೆ ಭಾರತದಲ್ಲಿ ಆಕ್ಷೇಪ ಎದುರಾಗುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಮಾಹಿತಿ ಆಯುಕ್ತ ಉದಯ್ ಮಹುರ್ಕರ್ ತಕರಾರು ತೆಗೆದಿದ್ದು, ಸೋಶಿಯಲ್ ಮೀಡಿಯಾ ಮೂಲಕ ಅವರು ‘ಆಪನ್ಹೈಮರ್’ ಚಿತ್ರತಂಡವನ್ನು ಪ್ರಶ್ನಿಸಿದ್ದಾರೆ.
ಅಣುಬಾಂಬ್ ಕಂಡು ಹಿಡಿದ ಅಮೆರಿಕದ ವಿಜ್ಞಾನಿ ಜೆ. ರಾಬರ್ಟ್ ಆಪನ್ಹೈಮರ್ ಅವರ ಜೀವನದ ಕುರಿತು ‘ಆಪನ್ಹೈಮರ್’ ಸಿನಿಮಾ . ಆಪನ್ಹೈಮರ್ ಪಾತ್ರವನ್ನು ಕಿಲಿಯನ್ ಮರ್ಫಿ ಮಾಡಿದ್ದಾರೆ. ರಿಯಲ್ ಲೈಫ್ನಲ್ಲೂ ಆಪನ್ಹೈಮರ್ ಅವರಿಗೆ ಹಿಂದು ಪುರಾಣಗಳ ಬಗ್ಗೆ ಆಸಕ್ತಿ ಇತ್ತು. ಅವರು ಸಂಸ್ಕೃತ ಕಲಿತಿದ್ದರು ಮತ್ತು ಭಗವದ್ಗೀತೆ ಓದಿಕೊಂಡಿದ್ದರು. ಅದಕ್ಕೆ ಸಂಬಂಧಿಸಿದಂತೆ ಈ ಸಿನಿಮಾದಲ್ಲಿ ಒಂದು ದೃಶ್ಯದಲ್ಲಿ ಆಪನ್ಹೈಮರ್ ಜೊತೆ ಲೈಂಗಿಕ ಕ್ರಿಯೆ ನಡೆಸುತ್ತಿರುವ ಪ್ರೇಯಸಿಗೆ ಅನೇಕ ಪುಸ್ತಕಗಳು ಕಾಣಿಸುತ್ತವೆ. ಆ ಪೈಕಿ ಒಂದು ಪುಸ್ತಕವನ್ನು ಕೈಗೆತ್ತಿಕೊಂಡು ‘ಇದು ಏನು’ ಅಂತ ಆಕೆ ಪ್ರಶ್ನಿಸುತ್ತಾಳೆ. ‘ಇದು ಭಗವದ್ಗೀತೆ’ ಎಂದು ಆಪನ್ಹೈಮರ್ ಹೇಳುತ್ತಾರೆ ಮತ್ತು ಅದರಲ್ಲಿನ ಒಂದೆರಡು ಸಾಲುಗಳನ್ನು ವಿವರಿಸುತ್ತಾರೆ. ಈ ದೃಶ್ಯ ಈಗ ಭಾರತೀಯರನ್ನು ಕೆರಳಿಸಿದೆ.
ಇಂಥ ದೃಶ್ಯಕ್ಕೆ ಭಾರತದಲ್ಲಿ ಸೆನ್ಸಾರ್ ಮಂಡಳಿಯವರು ಹೇಗೆ ಅನುಮತಿ ನೀಡಿದರು ಎಂದು ಕೆಲವರು ತಕರಾರು ತೆಗೆದಿದ್ದಾರೆ. ಇದು ಹಿಂದು ಧರ್ಮದ ಮೇಲೆ ಮಾಡಲಾಗಿರುವ ದಾಳಿ ಎನ್ನುವ ಟೀಕೆ ಕೂಡ ವ್ಯಕ್ತವಾಗುತ್ತಿದೆ.
‘ಸೇವ್ ಕಲ್ಚರ್ ಸೇವ್ ಇಂಡಿಯಾ ಪ್ರತಿಷ್ಠಾನ’ದ ವತಿಯಿಂದ ಉದಯ್ ಮಹುರ್ಕರ್ ‘ಆಪನ್ಹೈಮರ್’ ಸಿನಿಮಾದ ನಿರ್ದೇಶಕ ಕ್ರಿಸ್ಟೋಫರ್ ನೋಲನ್ಗೆ ಪತ್ರ ಬರೆದಿದ್ದಾರೆ. ಸಿನಿಮಾದಲ್ಲಿ ಇರುವ ಆಕ್ಷೇಪಾರ್ಹ ದೃಶ್ಯವನ್ನು ತೆಗೆದುಹಾಕುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಕ್ರಿಸ್ಟೋಫರ್ ನೋಲನ್ ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡಬೇಕಿದೆ.