ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಸರ್ಕಾರವು ಅನಾವಶ್ಯಕ ಅಥವಾ ಕಾರ್ಯನಿರ್ವಹಣೆಯಲ್ಲಿ ಕಡಿಮೆ ಪರಿಣಾಮಕಾರಿಯಾಗಿರುವ ಸರ್ಕಾರಿ ಮಂಡಳಿ ಮತ್ತು ಸಂಸ್ಥೆಗಳ ಕುರಿತು ಮಹತ್ತರ ಕ್ರಮಗಳನ್ನು ಕೈಗೊಳ್ಳಲು ಸಿದ್ಧವಾಗಿದೆ. ರಾಜ್ಯ ಆಡಳಿತ ಸುಧಾರಣಾ ಆಯೋಗ-2 ರ 9ನೇ ವರದಿಯಲ್ಲಿ 7 ಮಂಡಳಿಗಳನ್ನು ಅಮಾನತು ಮಾಡುವುದು ಮತ್ತು 9 ಸಂಸ್ಥೆಗಳನ್ನು ಬೇರೆ ಇಲಾಖೆ ಅಥವಾ ನಿಗಮಗಳೊಂದಿಗೆ ವಿಲೀನ ಮಾಡುವಂತೆ ಶಿಫಾರಸು ಮಾಡಲಾಗಿದೆ. ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ವರದಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದು, ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವರದಿಯ ಪ್ರಮುಖ ಅಂಶಗಳನ್ನು ವಿವರಿಸಿದರು.
ವರದಿಯಲ್ಲಿ ರಾಜ್ಯದ 148 ನಿಗಮ-ಮಂಡಳಿಗಳಲ್ಲಿ 82 ಸಂಸ್ಥೆಗಳ ಪರಿಶೀಲನೆ ನಡೆಸಲಾಗಿದೆ. ಐದು ವರ್ಷಗಳ ಆರ್ಥಿಕ ವ್ಯವಹಾರ, ಸಿಬ್ಬಂದಿ ಕಾರ್ಯದೊತ್ತಡ ಮತ್ತು ಕಾರ್ಯಚಟುವಟಿಕೆಗಳನ್ನು ಗಮನಿಸಿದ ನಂತರ, ರಾಜ್ಯ ಸಮಾಜ ಕಲ್ಯಾಣ ಮಂಡಳಿ, ರಾಜ್ಯ ಸಂಯಮ ಮಂಡಳಿ, ಸಹಕಾರಿ ಕೋಳಿ ಸಾಕಣೆ ಒಕ್ಕೂಟ, ಕರ್ನಾಟಕ ಪಲ್ಪ್‌ವುಡ್ ಲಿಮಿಟೆಡ್, ಮೈಸೂರು ಲ್ಯಾಂಪ್ ವರ್ಕ್ಸ್ ಲಿಮಿಟೆಡ್ ಸೇರಿದಂತೆ ಕೆಲವು ಸಂಸ್ಥೆಗಳ ಮುಚ್ಚುವಿಕೆಯನ್ನು ಶಿಫಾರಸು ಮಾಡಲಾಗಿದೆ. ಇನ್ನು ಕೆಲವು ಸಂಸ್ಥೆಗಳನ್ನು ಅವಶ್ಯಕತೆ ಇಲ್ಲದಿದ್ದರೆ ಸಂಬಂಧಿತ ಇಲಾಖೆ ಅಥವಾ ನಿಗಮಗಳೊಂದಿಗೆ ವಿಲೀನ ಮಾಡಬೇಕು ಎಂಬ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಭೂಸ್ವಾಧೀನ, ನೀರಾವರಿ, ಗುಣಮಟ್ಟ ಮೇಲ್ವಿಚಾರಣೆ ಮತ್ತು ಆಧುನಿಕ ತಂತ್ರಜ್ಞಾನ ಬಳಕೆ ಸೇರಿದಂತೆ ವಿವಿಧ ಆಡಳಿತಾತ್ಮಕ ಸುಧಾರಣೆಗಳೂ ವರದಿಯಲ್ಲಿ ಸೇರ್ಪಡೆಗೊಂಡಿವೆ. ಆಯೋಗ ಶಿಫಾರಸು ಮಾಡಿದಂತೆ, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ವಿಳಂಬವನ್ನು ತಡೆಯಲು ಅಧಿಕಾರಿಗಳನ್ನು ವರ್ಗಾಯಿಸಬಾರದು ಮತ್ತು ಸಹಾಯಕ ಸಿಬ್ಬಂದಿ ನಿಯೋಜನೆ ಮಾಡಬೇಕು. ಯೋಜನೆ ಗಾತ್ರ ಮತ್ತು ಅವಧಿಗೆ ಅನುಗುಣವಾಗಿ ಅವಶ್ಯವಿರುವ ಸಹಾಯಕ ಸಿಬ್ಬಂದಿಯನ್ನು ಮಂಜೂರು ಮಾಡಬೇಕು ಅಂದರು.