ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲ್ಕ್ಯಾರಾದಲ್ಲಿ ಸುರಂಗದಿಂದ 17 ದಿನಗಳ ಬಳಿಕ ಎಲ್ಲಾ 41 ಕಾರ್ಮಿಕರ ರಕ್ಷಣೆ ಮಾಡಲಾಗಿದೆ.
ಇದಾದ ಬಳಿಕ ಸುದ್ದಿಗೋಷ್ಠಿ ನಡೆಸಿದ ಉತ್ತರಾಖಂಡದ ಸಿಎಂ ಪುಷ್ಕರ್ ಸಿಂಗ್ ಧಾಮಿ, ಎಲ್ಲಾ ಕಾರ್ಮಿಕರಿಗೂ ತಲಾ 1 ಲಕ್ಷ ರೂಪಾಯಿ ಪರಿಹಾರ ಹಣವನ್ನು ಘೋಷಣೆ ಮಾಡಿದ್ದಾರೆ.
ಇದರ ಜೊತೆಗೆ ಸ್ಥಳೀಯ ಜನರು ಅಲ್ಲಿದ್ದ ಶಿವ ದೇವಸ್ಥಾನವನ್ನು ಕೆಡವಿ ಸುರಂಗ ನಿರ್ಮಾಣ ಮಾಡಿದ್ದೇ ಈ ಅನಾಹುತಕ್ಕೆ ಕಾರಣ ಎಂದು ಹೇಳಿದ್ದರು. ಹೀಗಾಗಿ ನೆಲಸಮ ಮಾಡಿದ್ದ ಮಂದಿರವನ್ನು ಅದೇ ಪ್ರದೇಶದಲ್ಲಿ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಆರಂಭಿಕ ಹಂತದಲ್ಲಿ ನಮಗೆ ತುಂಬಾ ಭಯವಾಗಿತ್ತು. ಯಾವಾಗ ಅವರ ಜೊತೆ ಮಾತುಕತೆ ಆಡಿದೆವೋ ಆಗ ನಮಗೆ ಭರವಸೆ ಬಂತು.ಮೊದಲು ಚಿಕ್ಕವರನ್ನ ಕರೆತರಲು ನಿರ್ಧಾರ ಮಾಡಲಾಗಿತ್ತು. ನಂತರ ದೊಡ್ಡವರು ಟೀಂ ಲೀಡ್ ಮಾಡೋ ಐದು ಜನ ಬರಲು ನಿರ್ಧಾರವಾಗಿತ್ತು. ಮೊದಲು ನನಗೆ ರಕ್ಷಣಾ ಕಾರ್ಯಾಚರಣೆ ನಿಂತ ಕರೆ ಬಂದಾಗ ಭಯವಾಗಿತ್ತು. ಸದ್ಯ ಎಲ್ಲರನ್ನ 24 ಗಂಟೆ ನಿಗಾದಲ್ಲಿ ಇಡಲಾಗುವುದು. ಯಾರು ತೊಂದರೆಯಲ್ಲಿಲ್ಲ ಎಲ್ಲರು ಆರಾಮಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ದೇಶ ಮತ್ತು ವಿದೇಶದ ಹಲವಾರು ಜನ ಕಾರ್ಯದಲ್ಲಿ ಭಾಗಿಯಾಗಿದ್ದರು ಎಂದು ಧಾಮಿ ಹೇಳಿದ್ದಾರೆ.
ನೆಲಸಮ ಮಾಡಿದ್ದ ಮಂದಿರ ನಿರ್ಮಾಣಕ್ಕೆ ನಾವು ತೀರ್ಮಾನ ಮಾಡಿದ್ದೇವೆ . ಆ ಕಾರ್ಯ ನಡೆಯಲಿದೆ ಎಂದರು.
ದೆಹಲಿ ಮತ್ತು ಗೋರಖ್ಪುರದಿಂದ ಬಂದಿರುವ ಕಾರ್ಮಿಕರಿಂದ ರಾಟ್ ಮೈನಿಂಗ್ ರೀತಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದೆ. ದೀಪಾವಳಿಯ ಮಾರನೇ ದಿನದಿಂದ ನಾನು ನಿರಂತರವಾಗಿ ಇಲ್ಲೆ ಇದ್ದೆ. ಇಲ್ಲಿಂದಲೆ ನಾನು ರಾಜ್ಯದ ಇತರ ಕಾರ್ಯಮಾಡಿದ್ದೇನೆ. ರಾಜ್ಯ ಸರ್ಕಾರದಿಂದ ಎಲ್ಲಾ ಕಾರ್ಮಿಕರಿಗೆ ತಲಾ ಒಂದು ಲಕ್ಷ ನೀಡಲಾಗುವುದು. ನಾಳೆ ಚೆಕ್ ಮೂಲಕ ಪರಿಹಾರ ನೀಡಲಿದ್ದೇನೆ ಎಂದು ಹೇಳಿದ್ದಾರೆ.
ಎಲ್ಲರಿಗೂ 15 ದಿನ ಅಥವಾ ಒಂದು ತಿಂಗಳು ಮನೆಗೆ ಹೋಗಲು ಅವಕಾಶ ನೀಡಿದ್ದೇವೆ. ರಕ್ಷಣಾ ಕಾರ್ಯಾಚರಣೆಯ ವೆಚ್ಚ ಎಷ್ಟೆ ಆದರೂ ನಾವು ನೀಡಲು ತೀರ್ಮಾನ ಮಾಡಿದ್ದೆವು. ಪ್ರಧಾನಿ ಮೋದಿ ಈ ಬಗ್ಗೆ ಸ್ಪಷ್ಟ ಸೂಚನೆ ನೀಡಿದ್ದರು. ನಮಗೆ ಕಾರ್ಮಿಕರ ಜೀವ ಮುಖ್ಯವಾಗಿತ್ತು ಎಂದು ಧಾಮಿ ಹೇಳಿದ್ದಾರೆ.