ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಿರಿಯರ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಆರಂಭವಾದ ಮೊದಲ ದಿನವೇ ಬ್ಯಾಟಿಂಗ್ ದಾಖಲೆಗಳು ಧೂಳಿಪಟವಾಗಿವೆ. ಭಾರತ ಹಾಗೂ ಪಾಕಿಸ್ತಾನದ ಯುವ ಕ್ರಿಕೆಟಿಗರು ಸರಣಿ ಆರಂಭದಲ್ಲೇ ಅಬ್ಬರದ ಪ್ರದರ್ಶನ ನೀಡುವ ಮೂಲಕ ಟೂರ್ನಿಗೆ ಭರ್ಜರಿ ಕಿಕ್‌ಸ್ಟಾರ್ಟ್ ನೀಡಿದ್ದಾರೆ. ಎರಡು ಪಂದ್ಯಗಳಲ್ಲೂ ಕಂಡುಬಂದ ಶತಕೋತ್ಸವ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದು, ಏಷ್ಯಾಕಪ್ ಇತಿಹಾಸದಲ್ಲೇ ವಿಶೇಷ ದಿನವನ್ನಾಗಿ ಮಾಡಿದೆ.
ಯುಎಇ ವಿರುದ್ಧ ನಡೆದ ಆರಂಭಿಕ ಪಂದ್ಯದಲ್ಲಿ ಭಾರತದ ವೈಭವ್ ಸೂರ್ಯವಂಶಿ ಅಪ್ರತಿಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ದುಬೈನ ಐಸಿಸಿ ಅಕಾಡೆಮಿ ಮೈದಾನದಲ್ಲಿ ಕಣಕ್ಕಿಳಿದ ವೈಭವ್, ಕೇವಲ 95 ಎಸೆತಗಳಲ್ಲಿ 171 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಅವರ ಬ್ಯಾಟ್‌ನಿಂದ 14 ಸಿಕ್ಸ್ ಮತ್ತು 9 ಫೋರ್‌ಗಳು ಹೊರಬಂದು, ಅಂಡರ್-19 ಏಷ್ಯಾಕಪ್ 2025ರ ಗರಿಷ್ಠ ವೈಯಕ್ತಿಕ ಸ್ಕೋರ್ ಎಂಬ ದಾಖಲೆಯನ್ನು ಸ್ಥಾಪಿಸಿತು.
ಆದರೆ ಈ ದಾಖಲೆ ಹೆಚ್ಚು ಕಾಲ ಉಳಿಯಲಿಲ್ಲ. ಮುಂದಿನ ಪಂದ್ಯದಲ್ಲೇ ಪಾಕಿಸ್ತಾನದ ಸಮೀರ್ ಮಿನ್‌ಹಾಸ್ ಹೊಸ ಇತಿಹಾಸ ನಿರ್ಮಿಸಿದರು. ಮಲೇಷ್ಯಾ ವಿರುದ್ಧ ದುಬೈ ಸೆವೆನ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಸಮೀರ್, 148 ಎಸೆತಗಳಲ್ಲಿ ಅಜೇಯ 177 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಈ ಮೂಲಕ ಅವರು ಏಷ್ಯಾಕಪ್ ಟೂರ್ನಿಯಲ್ಲಷ್ಟೇ ಅಲ್ಲ, ಯೂತ್ ಒಡಿಐ ಕ್ರಿಕೆಟ್‌ನ ಚೊಚ್ಚಲ ಪಂದ್ಯದಲ್ಲೇ ಗರಿಷ್ಠ ಸ್ಕೋರ್ ದಾಖಲಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡರು.
2002ರಲ್ಲಿ ವೆಸ್ಟ್ ಇಂಡೀಸ್ ಆಟಗಾರ ಡೊನೊವೆನ್ ಪಾಗೊನ್ ನಿರ್ಮಿಸಿದ್ದ ದಾಖಲೆಯನ್ನು 13 ವರ್ಷಗಳ ಬಳಿಕ ಮುರಿದಿರುವ ಸಮೀರ್ ಮಿನ್‌ಹಾಸ್ ಪ್ರದರ್ಶನ ಯುವ ಕ್ರಿಕೆಟ್‌ನಲ್ಲಿ ಹೊಸ ಸಂಚಲನ ಮೂಡಿಸಿದೆ. ಟೂರ್ನಿ ಮುಂದುವರಿದಂತೆ ಇನ್ನಷ್ಟು ದಾಖಲೆಗಳು ಬೀಳುವ ನಿರೀಕ್ಷೆ ಇದೆ.

