ಹೊಸದಿಗಂತ ವರದಿ,ಕಾರವಾರ:
ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿಕೇಂದ್ರದ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ 2 ದಿನಗಳ ಕಾಲ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದ್ದು, ಉ.ಕ ಜಿಲ್ಲೆಯಲ್ಲಿ ಜ.19,20 ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ.
ಈ ಹಿನ್ನಲೆಯಲ್ಲಿ ಗುಡ್ಡ ಕುಸಿತ ಮತ್ತು ಇತರೇ ಅಪಾಯಕಾರಿ ಪ್ರದೇಶದಲ್ಲಿ ವಾಸಿಸುತ್ತಿರುವ ಸಾರ್ವಜನಿಕರಿಗೆ ಸುರಕ್ಷಿತ ಸ್ಥಳಗಳಿಗೆ ಅಥವಾ ಕಾಳಜಿ ಕೇಂದ್ರಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿನ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರವನ್ನು ತೆರೆಯಲಾಗಿದ್ದು, ಜಿಲ್ಲೆಯ ನೆರೆಪರಿಸ್ಥಿತಿಯ ಕುರಿತಂತೆ 24*7 ಪರಿಶೀಲಿಸಲಾಗುತ್ತಿದೆ. ಈ ಕೇಂದ್ರದಲ್ಲಿ ಪೋಲಿಸ್, ಅರಣ್ಯ, ಹೆಸ್ಕಾಂ, ಕಂದಾಯ ಇಲಾಖೆಯ ಸಿಬ್ಬಂದಿಗಳನ್ನು 24*7 ಕರ್ತವ್ಯ ನಿರ್ವಹಿಸಲು ನಿಯೋಜಿಸಲಾಗಿದೆ.
ರೆಡ್ ಅಲರ್ಟ್ ಸಮಯದಲ್ಲಿ ಜಿಲ್ಲೆಯ ಹೆದ್ದಾರಿ ಪ್ರದೇಶದಲ್ಲಿ ಗುಡ್ಡ ಕುಸಿತಗಳು ಸಂಭವಿಸುವ ಸಾಧ್ಯತೆಗಳಿರುವುದರಿಂದ ವಾಹನ ಸವಾರರು ಸಂಚಾರ ಸಮಯದಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ.
ಸಾರ್ವಜನಿಕರು ಹಾಗೂ ಮೀನುಗಾರರು ನದಿ,ನೀರಿರುವ ಪ್ರದೇಶ ಮತ್ತು ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರ ವಹಿಸುವುದು.
ಈ ಸಂದರ್ಭದಲ್ಲಿ ಮಕ್ಕಳು,ಸಾರ್ವಜನಿಕರು ಅಪಾಯಕಾರಿ ವಿದ್ಯುತ್ ಕಂಬದ ಹತ್ತಿರ ಸುಳಿಯಬಾರದು ಮತ್ತು ತುಂಡಾದ ವಿದ್ಯುತ್ ತಂತಿಗಳಿಂದ ದೂರವಿರುವುದು. ದುರ್ಬಲವಾದ ಹಳೆಯ ಕಟ್ಟಡ ಅಥವಾ ಮರಗಳ ಕೆಳಗೆ ನಿಲ್ಲಬಾರದು.
ಸಾರ್ವಜನಿಕರು ತಗ್ಗು ಪ್ರದೇಶದಲ್ಲಿ ಅಥವಾ ಮಳೆಯಿಂದ ಅಪಾಯಕ್ಕೀಡಾಗುವ ಪ್ರದೇಶದಲ್ಲಿ ವಾಸವಿದ್ದಲ್ಲಿ ಅಥವಾ ಶೀಥಿಲಾವಸ್ಥೆಯಿಂದ ಜಾರುವ ಹಂತದಲ್ಲಿರುವ ಕಂಪೌಂಡ್ ಅಥವಾ ಮನೆಯ ಗೋಡೆ, ಇಂತಹ ದುರ್ಬಲವಾದ ಕಟ್ಟಡದಲ್ಲಿ ವಾಸವಿರುವ ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿ ವಾಸಿಸುವುದು, ಅಗತ್ಯ ವಿದ್ದಲ್ಲಿ ಈಗಾಗಲೇ ಸಂಬಂಧಿಸಿದ ತಹಶೀಲ್ದಾರರಿಂದ ಗುರುತಿಸಲ್ಪಟ್ಟ ಕಾಳಜಿ ಕೇಂದ್ರದಲ್ಲಿ ಕಡ್ಡಾಯವಾಗಿ ಆಶ್ರಯ ಪಡೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಯಾವುದೇ ತುರ್ತು ಸಂದರ್ಭದಲ್ಲಿ ಜಿಲ್ಲಾ ವಿಪತ್ತು ತುರ್ತು ಸಹಾಯವಾಣಿ ಸಂಖ್ಯೆ-1077/9483511015 ಗೆ ಸಂರ್ಪಕಿಸಲು ಕೋರಲಾಗಿದೆ.