ಹೊಸದಿಗಂತ ಡಿಜಿಟಲ್ ಡೆಸ್ಕ್:
79ನೇ ಸ್ವಾತಂತ್ರ್ಯ ದಿನವನ್ನು ಸಂಭ್ರಮ ಮತ್ತು ಉತ್ಸಾಹದಿಂದ ಆಚರಿಸಲು ಭಾರತ ಸಜ್ಜಾಗಿದೆ. ನಾಳೆ ಅಂದರೆ, ಶುಕ್ರವಾರ ಆಗಸ್ಟ್ 15ರಂದು ಐತಿಹಾಸಿಕ ಕೆಂಪು ಕೋಟೆ ಮೇಲೆ ಭಾರತದ ಧ್ವಜಾರೋಹಣ ನೆರವೇರಲಿದೆ.
ಸ್ವಾತಂತ್ರ್ಯ ದಿನಾಚರಣೆಗೆ ಮುನ್ನಾ ದಿನದ ಸಂಜೆ ಅಂದರೆ, ಇಂದು ಸಂಜೆ ದೇಶವನ್ನು ಉದ್ದೇಶಿಸಿ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಭಾಷಣ ಮಾಡಲಿದ್ದಾರೆ. ಈ ಭಾಷಣದಲ್ಲಿ ದೇಶ ಬೆಳೆದು ಬಂದ ಹಾದಿಯ ಪ್ರಯಾಣವನ್ನು ಅವರು ಮೆಲುಕು ಹಾಕಲಿದ್ದಾರೆ. ಹಾಗೇ ದೇಶದ ಮುಂದಿರುವ ಹೊಸ ಅವಕಾಶ ಮತ್ತು ಸವಾಲುಗಳನ್ನು ವಿವರಿಸಲಿರುವ ಅವರು ಇದರ ಜೊತೆಗೆ ಸರ್ಕಾರದ ಪ್ರಮುಖ ಆದ್ಯತೆ ಬೆಳವಣಿಗೆಗಳ ಕುರಿತು ತಿಳಿಸಲಿದ್ದಾರೆ.
ಕಳೆದ ವರ್ಷ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದಿರುವ ವರ್ಗಗಳಿಗೆ ಕೇಂದ್ರ ಸರ್ಕಾರದ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡಿರುವ ಕುರಿತು ಮುರ್ಮು ತಿಳಿಸಿದ್ದರು. ಅಮೃತ್ ಕಾಲ ಕುರಿತು ಒತ್ತಿ ಹೇಳಿದ ಅವರು ದೇಶದ ಯುವ ಶಕ್ತಿ ಮತ್ತು ಉತ್ಸಾಹವು ದೇಶವು ಹೊಸ ಎತ್ತರಕ್ಕೆ ಏರಲು ಸಹಾಯ ಮಾಡುತ್ತದೆ ಎಂದಿದ್ದರು.
ಸ್ವಾತಂತ್ರ್ಯ ದಿನಾಚರಣೆಗೆ ಮುನ್ನಾ ದಿನದ ಸಂಜೆ ಕೇಂದ್ರ ಗೃಹ ಸಚಿವಾಲಯದಿಂದ ರಾಷ್ಟ್ರಪತಿಗಳ ಶೌರ್ಯ ಪದಕ, ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಮತ್ತು ಪ್ರತಿಭಾನ್ವಿತ ಸೇವಾ ಪದಕ ವಿಜೇತರ ಹೆಸರನ್ನು ಕೇಂದ್ರ ಸರ್ಕಾರ ಪ್ರಕಟಿಸಲಾಗುವುದು.
ಸ್ವಾತಂತ್ರ್ಯ ದಿನಾಚರಣೆಯಂದು ಬೆಳಗ್ಗೆ 9ಕ್ಕೆ ಕೆಂಪು ಕೋಟೆಯಲ್ಲಿ ಸಶಸ್ತ್ರ ಪಡೆಗಳು ಮತ್ತು ದೆಹಲಿ ಪೊಲೀಸರಿಂದ ಗೌರವ ವಂದನೆಗಳೊಂದಿಗೆ ಆಚರಣೆ ಆರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಧ್ವಜವನ್ನು ಹಾರಿಸಲಿದ್ದಾರೆ. ನಂತರ ರಾಷ್ಟ್ರಗೀತೆ ಹಾಡಲಾಗುವುದು. 21 ಗುಂಡುಗಳ ಗೌರವ ವಂದನೆ ಮತ್ತು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳಿಂದ ಹೂವಿನ ದಳಗಳ ಮಳೆ ಸುರಿಸಲಾಗುವುದು.
ಇದಾದ ಬಳಿಕ ಪ್ರಧಾನಿ ಮೋದಿ ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆ ಬಳಿಕ ಮತ್ತೆ ರಾಷ್ಟ್ರಗೀತೆ ಹಾಡಲಾಗುತ್ತದೆ. ನಂತರ ತ್ರಿವರ್ಣದ ಬಲೂನ್ಗಳನ್ನು ಗಾಳಿಯಲ್ಲಿ ಹಾರಿ ಬಿಡಲಾಗುವುದು.