Wednesday, October 29, 2025

ನೋಂದಣಿ, ಖರೀದಿ ಪ್ರಕ್ರಿಯೆ ಏಕಕಾಲಕ್ಕೆ ಆರಂಭ: ಸಚಿವ ಶಿವಾನಂದ ಪಾಟೀಲ ಸೂಚನೆ

ಹೊಸದಿಗಂತ ವರದಿ ಬೆಂಗಳೂರು:

ಬೆಂಬಲ ಬೆಲೆಯಲ್ಲಿ ಸೋಯಾಬಿನ್‌ ಮತ್ತು ಶೇಂಗಾ ಖರೀದಿ ಮಾಡಲು ಖರೀದಿ ಕೇಂದ್ರ ಆರಂಭಕ್ಕೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಹಾಗೂ ನೋಂದಣಿ ಮತ್ತು ಖರೀದಿ ಪ್ರಕ್ರಿಯೆಯನ್ನು ಏಕಕಾಲಕ್ಕೆ ಆರಂಭಿಸಬೇಕು ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಜಿಲ್ಲಾ ಟಾಸ್ಕ್‌ಪೋರ್ಸ್‌ ಸಮಿತಿಗಳಿಗೆ ಸೂಚಿಸಿದ್ದಾರೆ.

ಸೋಯಾಬಿನ್‌ಗೆ ಕ್ವಿಂಟಾಲ್‌ಗೆ 5,328 ರೂ., ಹಾಗೂ ಶೇಂಗಾಗೆ 7,623 ರೂ. ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಬೀದರ್‌, ಬೆಳಗಾವಿ, ಧಾರವಾಡ, ಹಾವೇರಿ, ಯಾದಗಿರಿ, ಕಲಬುರಗಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸೋಯಾಬಿನ್‌ ಹಾಗೂ ಕೊಪ್ಪಳ, ಧಾರವಾಡ, ಹಾವೇರಿ, ವಿಜಯನಗರ, ಬಳ್ಳಾರಿ, ಚಿತ್ರದುರ್ಗ, ಗದಗ, ಬಾಗಲಕೋಟೆ, ದಾವಣಗೆರೆ, ರಾಯಚೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಶೇಂಗಾ ಖರೀದಿ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ನಾಫೆಡ್‌, ಎನ್‌ಸಿಸಿಎಫ್‌ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳವನ್ನು ಖರೀದಿಗೆ ಏಜನ್ಸಿಯಾಗಿ ನೇಮಕ ಮಾಡಲಾಗಿದೆ. ನೋಂದಣಿಗೆ 80 ದಿನ ಹಾಗೂ ಖರೀದಿಗೆ 90 ದಿನ ನಿಗದಿಪಡಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಅಗತ್ಯಕ್ಕೆ ಅನುಗುಣವಾಗಿ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು, ಖರೀದಿ ಕೇಂದ್ರಗಳಲ್ಲಿ ಲೋಪಗಳಾಗದಂತೆ ಎಚ್ಚರಿಕೆ ವಹಿಸಬೇಕು ಹಾಗೂ ಮಾರ್ಗಸೂಚಿ ಅನ್ವಯ ಖರೀದಿ ಮಾಡಲಾಗುತ್ತಿದೆಯೇ? ಎಂಬ ಬಗ್ಗೆ ನಿರಂತರವಾಗಿ ನಿಗಾ ವಹಿಸಬೇಕು ಎಂದು ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಎಫ್‌ಎಕ್ಯೂ ಗುಣಮಟ್ಟ ಪರಿಶೀಲನೆಗೆ ಕೃಷಿ ಅಥವಾ ತೋಟಗಾರಿಕೆ ಇಲಾಖೆಯಲ್ಲಿ ಲಭ್ಯ ಇರುವ ಅಧಿಕಾರಿಗಳನ್ನು ಬಳಸಿಕೊಳ್ಳಬೇಕು. ಅಗತ್ಯವಿದ್ದರೆ ಖರೀದಿ ಸಂಸ್ಥೆಗಳು ಅಂತಹ ಅಧಿಕಾರಿಗಳಿಗೆ ತರಬೇತಿ ತರಬೇತಿ ನೀಡಬೇಕು ಎಂದು ಸೂಚಿಸಿದ್ದಾರೆ

error: Content is protected !!