ಹೊಸದಿಗಂತ ಡಿಜಿಟಲ್ ಡೆಸ್ಕ್ :
62 ದಿನಗಳ ಅಮರನಾಥ ಯಾತ್ರೆಯ ನೋಂದಣಿ ಪ್ರಕ್ರಿಯೆ ದೇಶಾದ್ಯಂತ ಆರಂಭಗೊಂಡಿದೆ. ಪ್ರಸಕ್ತ ವರ್ಷ ಜುಲೈ 1 ರಂದು ಯಾತ್ರೆ ಆರಂಭವಾಗಲಿದ್ದು, ಆಗಸ್ಟ್ 31 ರಂದು ಯಾತ್ರೆ ಕೊನೆಗೊಳ್ಳಲಿದೆ.
ನೊಂದಣಿ ಪ್ರಕ್ರಿಯೆಗಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ)ನ 316 ಶಾಖೆಗಳು ಮತ್ತು ದೇಶಾದ್ಯಂತ ಇತರ 542 ಬ್ಯಾಂಕ್‌ಗಳಲ್ಲಿ 62 ದಿನಗಳ ಅಮರನಾಥ ಯಾತ್ರೆಯ ನೋಂದಣಿ ಪ್ರಕ್ರಿಯೆ ನಡೆಯಲಿದೆ.
ಈ ವರ್ಷ ಆಧಾರ್ ಆಧಾರಿತ ನೋಂದಣಿಯನ್ನು ಮಾಡಲಾಗುತ್ತಿದ್ದು, ಇದರಲ್ಲಿ ನೋಂದಣಿಗಾಗಿ ಯಾತ್ರೆಗೆ ತೆರಳುವ ಯಾತ್ರಿಕರ ಹೆಬ್ಬೆರಳಿನ ಸ್ಕ್ಯಾನ್ ಅಗತ್ಯವಿದೆ.
ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಟ್ರ್ಯಾಕ್ ಮತ್ತು ಗಂಡರ್ಬಾಲ್ ಜಿಲ್ಲೆಯ ಬಾಲ್ಟಾಲ್‌ನಲ್ಲಿ ನೋಂದಣಿ ಪ್ರಾರಂಭವಾಗಿದೆ. ಅಮರನಾಥ ಯಾತ್ರೆಗೆ ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕವೂ ನೊಂದಣಿ ಮಾಡಿಕೊಳ್ಳಬಹುದು. ಪಿಎನ್‌ಬಿಯ 316 ಶಾಖೆಗಳು, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್‌ನ 90 ಶಾಖೆಗಳು, ಯೆಸ್ ಬ್ಯಾಂಕ್‌ನ 37 ಶಾಖೆಗಳು ಮತ್ತು ಎಸ್‌ಬಿಐ ಬ್ಯಾಂಕ್‌ನ 99 ಶಾಖೆಗಳು ಸೇರಿದಂತೆ ದೇಶಾದ್ಯಂತ 542 ಬ್ಯಾಂಕ್ ಶಾಖೆಗಳಲ್ಲಿ ಆಫ್‌ಲೈನ್ ನೋಂದಣಿಯನ್ನು ಮಾಡಿಕೊಳ್ಳಬಹುದು.
ಮಾರ್ಗಸೂಚಿಗಳ ಪ್ರಕಾರ, 13 ರಿಂದ 70 ವರ್ಷ ವಯಸ್ಸಿನ ವ್ಯಕ್ತಿಗಳು ಅಮರನಾಥ ಯಾತ್ರೆ 2023ಗೆ ನೋಂದಾಯಿಸಿಕೊಳ್ಳಬಹುದು.
ಬ್ಯಾಂಕ್ ಶಾಖೆಗಳ ಮೂಲಕ ಅಮರನಾಥ ಯಾತ್ರೆಗೆ ಮುಂಗಡ ನೋಂದಣಿಗೆ 120 ರೂಪಾಯಿ ವೆಚ್ಚವಾಗಲಿದೆ. ಆನ್‌ಲೈನ್ ನೋಂದಣಿಗಾಗಿ, ಪ್ರತಿ ಯಾತ್ರಿಕರಿಗೆ ಶುಲ್ಕ 220 ರೂಪಾಯಿ ಪಾವತಿಸಬೇಕು. ಪಂಜಾಬ್ ನ್ಯಾಷನಲ್ ಬ್ಯಾಂಕ್ ಮೂಲಕ ಎನ್‌ಆರ್‌ಐ ಯಾತ್ರಿಗಳಿಗೆ ನೋಂದಣಿ ಶುಲ್ಕವು ಪ್ರತಿ ಯಾತ್ರಿಕರಿಗೆ 1,520 ರೂಪಾಯಿ ಆಗಿರುತ್ತದೆ. ಬ್ಯಾಂಕ್ ಶಾಖೆಗಳ ಮೂಲಕ ನೀವು ಮುಂಗಡ ನೋಂದಣಿಗಳನ್ನು ಮಾಡಬಹುದು ಅಥವಾ ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮುಂಗಡ ನೋಂದಣಿಗಳನ್ನು ಸಹ ಮಾಡಬಹುದು. ಯಾತ್ರಿಗಳು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಸ್ಟೋರ್ ಎರಡರಲ್ಲೂ ಲಭ್ಯವಿರುವ ಅವರ ಮೊಬೈಲ್ ಅಪ್ಲಿಕೇಶನ್ ಮೂಲಕವೂ ನೀವು ನೋಂದಾಯಿಸಿಕೊಳ್ಳಬಹುದು.