ಆಕಸ್ಮಿಕವಾಗಿ ಆದ ದುರ್ಘಟನೆ ಬಗ್ಗೆ ವಿಷಾದ ಇರಲಿ, ರಾಜಕೀಯ ಬೇಡ: ಡಿಕೆ ಸುರೇಶ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತದಿಂದ 11 ಜನ ಮೃತಪಟ್ಟಿರುವ ದುರ್ಘಟನೆ ಆಕಸ್ಮಿಕವಾಗಿ ನಡೆದಿದೆ. ಈ ದುರ್ಘಟನೆಗೆ ವಿಷಾದ ವ್ಯಕ್ತಪಡಿಸಿ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಬೇಕೇ ಹೊರತು ಇದರಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಬಾರದು ಎಂದು ನಿಕಟಪೂರ್ವ ಸಂಸದರಾದ ಡಿ.ಕೆ. ಸುರೇಶ್ ತಿಳಿಸಿದರು.

ಆರ್ ಸಿಬಿ ಗೆಲುವಿನ ಸಂಭ್ರಮದಲ್ಲಿನ ಕಾಲ್ತುಳಿತಕ್ಕೆ ಸರ್ಕಾರವೇ ಹೊಣೆ ಎಂಬ ವಿರೋಧ ಪಕ್ಷಗಳ ಟೀಕೆ ಬಗ್ಗೆ ಕೇಳಿದಾಗ, ಈ ದುರಂತಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಸಂಭ್ರಮಾಚರಣೆ ವೇಳೆ ಇಂತಹ ದುರಂತ ಸಂಭವಿಸಬಾರದಿತ್ತು. 18 ವರ್ಷಗಳಲ್ಲಿ ಮೂರು ಬಾರಿ ಐಪಿಎಲ್ ಫೈನಲ್ ತಲುಪಿದ್ದರೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಬಾರಿ ರಾಜ್ಯದಲ್ಲಿ ಮಾತ್ರವಲ್ಲ ದೇಶಾದ್ಯಂತ ಈ ಗೆಲುವಿಗೆ ಅಭಿಮಾನಿಗಳು ಪ್ರಾರ್ಥನೆ ಮಾಡಿದ್ದರು.

ಆರ್ ಸಿಬಿ ತಂಡ ಗೆಲುವಿನ ಸಂಭ್ರಮಾಚರಣೆಯಲ್ಲಿ 11 ಮಂದಿ ಮೃತಪಟ್ಟಿರುವುದು ಅವರ ಕುಟುಂಬಕ್ಕೆ ಕರಾಳ ದಿನವಾಗಿದ್ದು, ಕ್ರೀಡಾ ಕ್ಷೇತ್ರಕ್ಕೆ ಕಪ್ಪು ಚುಕ್ಕೆ. ಈ ಕಾರ್ಯಕ್ರಮಕ್ಕೆ ಸ್ವಲ್ಪ ಕಾಲಾವಕಾಶ ಪಡೆದು ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಆಯೋಜಿಸಬೇಕಿತ್ತು. ಆತುರದಲ್ಲಿ ಆದ ಸಂಭ್ರಮಾಚರಣೆ ದುರ್ಘಟನೆಗೆ ಕಾರಣವಾಗಿದೆ. ಇದರ ತನಿಖೆ ಮಾಡಿ ಲೋಪದೋಷಗಳನ್ನು ಸರಿಪಡಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದರು.

ಇಷ್ಟೇ ಜನ ಬರುತ್ತಾರೆ ಎಂದು ಊಹಿಸಲು ಯಾರಿಗೂ ಸಾಧ್ಯವಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದ ಸಾಮರ್ಥ್ಯವೇ 35 ಸಾವಿರ. ಆದರೆ ನಿನ್ನೆ ಕ್ರೀಡಾಂಗಣದ ಬಳಿ 2 ಲಕ್ಷ ಜನ ಸೇರಿದ್ದರು. ಹೀಗಾಗಿ ಯಾರ ನಿಯಂತ್ರಣಕ್ಕೂ ಸಿಗಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಎಷ್ಟೇ ಜನ ಪೊಲೀಸರನ್ನು ನಿಯೋಜಿಸಿದರೂ ನಿಯಂತ್ರಣ ಕಷ್ಟ. ಮಾಧ್ಯಮಗಳ ವರದಿ ಪ್ರಕಾರ 4-5 ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿತ್ತು. ಇದು ಆಕಸ್ಮಿಕವಾದ ಘಟನೆ. ಈ ಘಟನೆಯನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಟೀಕೆ ಮಾಡುತ್ತಿವೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!