ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಬೇರೆ ಬೇರೆ ಶಿಬಿರಗಳಿಂದ ಆನೆಗಳು ಆಗಮಿಸಿ ಅರಮನೆ ಆವರಣವನ್ನು ಪ್ರವೇಶಿಸಿವೆ. ದಸರಾ ಜಂಬೂಸವಾರಿಗೆ ಆಗಮಿಸಿರುವ ಆನೆಗಳು ಇಂದಿನಿಂದ ತಾಲೀಮಿನಲ್ಲಿ ನಿರತವಾಗಿವೆ. ಇಂದು ಮೊದಲ ದಿನದ ತಾಲೀಮಿಗೂ ಮುನ್ನ ಅರಮನೆ ಅಂಗಳಕ್ಕೆ ಆಗಮಿಸಿರುವ ಮೊದಲ ತಂಡದ ಆನೆಗಳ ತೂಕ ಪರೀಕ್ಷಿಸಲಾಗಿದ್ದು, ಈ ಪೈಕಿ ಅಂಬಾರಿ ಹೊರುವ ಆನೆ ಅಭಿಮನ್ಯು ಆನೆಗಿಂತಲೂ ಭೀಮನೇ ಹೆಚ್ಚು ಬಲಶಾಲಿಯಾಗಿದ್ದಾನೆ ಅನ್ನೋದು ಗೊತ್ತಾಗಿದೆ.
ಯಾವ ಆನೆಯ ತೂಕ ಎಷ್ಟಿದೆ?
ಅಭಿಮನ್ಯು – 5,360 ಕೆಜಿ
ಭೀಮ – 5,465 ಕೆಜಿ
ಧನಂಜಯ – 5,310 ಕೆಜಿ
ಕಾವೇರಿ – 3,010 ಕೆಜಿ
ಲಕ್ಷ್ಮೀ – 3,730 ಕೆಜಿ
ಏಕಲವ್ಯ – 5,305 ಕೆಜಿ
ಮಹೇಂದ್ರ – 5,120 ಕೆಜಿ
ಕಂಜನ್ – 4,880 ಕೆಜಿ
ಪ್ರಶಾಂತ – 5,110 ಕೆಜಿ
ನಗರದ ಧನ್ವಂತ್ರಿ ರಸ್ತೆಯಲ್ಲಿರುವ ಸಾಯಿರಾಮ್ ತೂಕ ಮಾಪನ ಕೇಂದ್ರದಲ್ಲಿ ಆನೆಗಳ ತೂಕ ಪರಿಶೀಲನೆ ಮಾಡಿ, ಬಳಿಕ ಮೆರವಣಿಗೆ ನಡೆಸಲಾಯಿತು. ಸತತ ಒಂದು ತಿಂಗಳ ಆನೆಗಳಿಗೆ ನಿತ್ಯ ತರಬೇತಿ ನೀಡಲಾಗುತ್ತದೆ. ಬೆಳಗ್ಗೆ ಸಂಜೆ ಎರಡು ಸಮಯ ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮು ನಡೆಸಲಾಗುತ್ತೆ. ಇದರೊಂದಿಗೆ ಪಟಾಕಿ, ಕುಶಾಲತೋಪು ಸಿಡಿಸುವ ತಾಲೀಮು, ಮರದ ಅಂಬಾರಿ ಮೆರವಣಿಗೆ ತಾಲೀಮು ಸಹ ನಡೆಯಲಿವೆ. ಸದ್ದುಗದ್ದಲದಿಂದ ವಿಚಲಿತವಾಗದಂತೆ ನೋಡಿಕೊಳ್ಳಲು ಆನೆಗಳಿಗೆ ರೀತಿಯ ತರಬೇತಿ ನೀಡಲಾಗುವುದು.