ಕೆಲಸದ ಒತ್ತಡ, ಸುಸ್ತು, ತಲೆಬಿಸಿ ಎಲ್ಲವಕ್ಕೂ ಪರಿಹಾರವೆನಿಸುವುದೆ ಒಂದು ಬಿಸಿ ಕಪ್ ಟೀ. ಆದರೆ, ಅದೇ ಟೀಯನ್ನು ಮತ್ತೆ ಮತ್ತೆ ಬಿಸಿ ಮಾಡಿ ಕುಡಿಯುವ ಅಭ್ಯಾಸ ನೀವು ಹೊಂದಿದ್ದರೆ, ಎಚ್ಚರಿಕೆಯಿಂದಿರಿ. ಈ ಅಭ್ಯಾಸದಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀಳಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಬ್ಯಾಕ್ಟೀರಿಯಾ ಅಭಿವೃದ್ಧಿಗೆ ಅವಕಾಶ:
ಚಹಾವನ್ನು 4 ಗಂಟೆಗಳಿಗೂ ಹೆಚ್ಚು ಕಾಲ ಇಟ್ಟು ನಂತರ ಮತ್ತೆ ಬಿಸಿ ಮಾಡಿದರೆ, ಅದರಲ್ಲಿ ಶಿಲೀಂಧ್ರಗಳು ರೂಪುಗೊಳ್ಳಬಹುದು. ಇದರಿಂದ ಬ್ಯಾಕ್ಟೀರಿಯಾದಂತಹ ಹಾನಿಕಾರಕ ಸೂಕ್ಷ್ಮಜೀವಿಗಳು ವೃದ್ಧಿಯಾಗುತ್ತವೆ. ಇಂತಹ ಟೀ ಕುಡಿದರೆ ಹೊಟ್ಟೆ ನೋವು, ವಾಂತಿ ಅಥವಾ ಅತಿಸಾರ ಮುಂತಾದ ಜೀರ್ಣಕ್ರಿಯಾ ಸಮಸ್ಯೆಗಳಿಗೆ ಕಾರಣವಾಗಬಹುದು.
ಪೋಷಕಾಂಶಗಳ ನಾಶ:
ಹರ್ಬಲ್ ಟೀ ಅಥವಾ ಗ್ರೀನ್ ಟೀ ಪ್ರಕಾರದ ಚಹಾಗಳನ್ನು ಎರಡನೇ ಬಾರಿ ಬಿಸಿ ಮಾಡಿದರೆ, ಅದರಲ್ಲಿರುವ ವಿಟಮಿನ್‌ಗಳು, ಖನಿಜಗಳು ನಾಶವಾಗುತ್ತವೆ. ಇದರಿಂದ ಟೀ ಸೇವನೆಯಿಂದ ದೊರೆಯಬೇಕಾದ ಲಾಭಗಳು ಕಳೆದುಹೋಗುತ್ತವೆ. ಜೊತೆಗೆ ದೇಹದಲ್ಲಿ ಹೊಟ್ಟೆಯುಬ್ಬರ, ವಾಕರಿಕೆ ಉಂಟಾಗುವ ಸಂಭವವಿದೆ.
ಟೀ ರುಚಿಯ ಕಳೆದುಕೊಳ್ಳುತ್ತದೆ:
ಚಹಾವನ್ನು ಹಾಲಿನೊಂದಿಗೆ ಬಿಸಿ ಮಾಡಿದರೆ, ಅದು 41°F ರಿಂದ 140°F ನಡುವಿನ ತಾಪಮಾನದಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆಯ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ಇದು ಟೀಯ ರುಚಿಯನ್ನು ಬದಲಾಯಿಸುತ್ತದೆ.