Relationship | ಸುಖ ಸಂಸಾರಕ್ಕೊಂದು ಕಿವಿ ಮಾತು! ಪ್ರೀತಿ, ಗೌರವದ ದಾಂಪತ್ಯ ಜೀವನ ಹಳಿ ತಪ್ಪದಿರಲಿ

ಸಾಯೋ ತನಕ ಇರುವ ದಾಂಪತ್ಯ ಸಂಬಂಧವು ಎಲ್ಲರ ಕನಸು. ಆದರೆ ಪ್ರೀತಿಯ ಗಡಿ ಮೀರಿದ ನಡವಳಿಕೆ ಆ ದಾಂಪತ್ಯ ಬಂಡಿಯನ್ನು ದಾರಿಯ ಮಧ್ಯದಲ್ಲಿಯೇ ನಿಲ್ಲಿಸಿಬಿಡುತ್ತದೆ. ಎರಡು ಹೃದಯಗಳ ನಡುವೆ ನಂಬಿಕೆಯ ಸೇತುವೆ ನಿರ್ಮಿಸಲು ಕೇವಲ ಮದುವೆ ಸಾಕಾಗದು ಅದನ್ನು ಉಳಿಸಿಕೊಳ್ಳಲು ಪ್ರತಿದಿನವೂ ಪ್ರೀತಿ, ಸಹನೆ ಮತ್ತು ಪರಸ್ಪರ ಗೌರವದ ಅಗತ್ಯವಿದೆ.

ಜೀವನದ ಓಟದಲ್ಲಿ ಗಂಡ ಹೆಂಡತಿ ಇಬ್ಬರೂ ಕೂಡಾ ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು, ಒಟ್ಟಾಗಿ ನಡೆಯುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ, ಸಣ್ಣ ವಿಷಯಗಳೇ ಸಂಬಂಧದ ಗಂಭೀರ ಸಮಸ್ಯೆಗಳಾಗಿ ಬದಲಾಗುತ್ತವೆ. ಅಂಥದ್ದನ್ನು ತಪ್ಪಿಸಲು ಮತ್ತು ದಾಂಪತ್ಯವನ್ನು ಶುದ್ಧ ಪ್ರೀತಿ ತುಂಬಿದ ಬಾಂಧವ್ಯವನ್ನಾಗಿ ರೂಪಿಸಲು, ಕೆಲವು ಸರಳ ಆದರೆ ಪ್ರಾಮಾಣಿಕ ಜೀವನ ಮೌಲ್ಯಗಳು ತುಂಬಾ ಅಗತ್ಯ.

  • ಗಂಡ-ಹೆಂಡತಿ ಪರಸ್ಪರ ಪ್ರೀತಿಯಿಂದ ವರ್ತಿಸಿದರೆ, ಜಗಳಗಳ ಪ್ರಮಾಣ ಕಡಿಮೆಯಾಗುತ್ತದೆ. ಕೋಪದ ಸಮಯದಲ್ಲಿ ತಾಳ್ಮೆ ಮೆರೆಯುವುದು ಅತ್ಯಗತ್ಯ. ಅತಿಯಾದ ಕೋಪವು ತಪ್ಪು ತಿಳುವಳಿಕೆಗಳಿಗೆ ಕಾರಣವಾಗಬಹುದು. ಮನಸ್ಸಿನಲ್ಲಿ ಶುದ್ಧ ಪ್ರೀತಿಯಿದ್ದರೆ, ದಾಂಪತ್ಯದ ಮಧ್ಯೆ ವಿಶ್ವಾಸ ಹಾಗೂ ಗೌರವ ಬೆಳೆದಂತೆ.
  • ಅಲ್ಲದೆ, ದಿನನಿತ್ಯದ ಬದುಕಿನ ಭಾಗವಾಗಿ, ಗಂಡ-ಹೆಂಡತಿ ತಮ್ಮ ತಮ್ಮ ದುಃಖ-ಸಂದೇಹಗಳನ್ನು ಹಂಚಿಕೊಳ್ಳಬೇಕು. ಇಂತಹ ಸಮರ್ಥ ಸಂವಹನದಿಂದ ಸಂಬಂಧ ಗಟ್ಟಿಯಾಗುತ್ತದೆ. ಕೆಲವೊಮ್ಮೆ ಅಹಂಕಾರವೂ ದೊಡ್ಡ ತೊಂದರೆಯಾಗಿ ಪರಿಣಮಿಸಬಹುದು. ಅಹಂ ಇರುವಲ್ಲಿ ಪ್ರೀತಿಯ ಅಗತ್ಯ ಭಾವನೆಗಳು ನಾಶವಾಗುತ್ತವೆ.
  • ಹೆಂಡತಿ ಗಂಡನಿಗೆ ಅಥವಾ ಗಂಡ ಹೆಂಡತಿಗೆ ಸೇವೆ ಸಲ್ಲಿಸುವ ಮನೋಭಾವ ಹೊಂದಿದರೆ, ಒಬ್ಬರ ಮೇಲೊಬ್ಬರ ಭರವಸೆ ಇನ್ನಷ್ಟು ಗಟ್ಟಿ ಆಗುತ್ತದೆ. ಯಾವುದೇ ಸಂಬಂಧದಲ್ಲಿ ಸೇವಾ ಮನೋಭಾವ ಹೆಚ್ಚು ಇದ್ದರೆ ಅಲ್ಲಿ ಕಷ್ಟಗಳನ್ನು ನಿರ್ವಹಿಸುವ ಶಕ್ತಿ ಹೆಚ್ಚಾಗುತ್ತದೆ.
  • ಜೊತೆಗೆ ದಿನಚರಿಯಲ್ಲಿ, ಗಂಡ ಹೆಂಡತಿಯರು ಪರಸ್ಪರ ಸಮಯ ಮೀಸಲಿಟ್ಟುಕೊಳ್ಳುವುದು ಭಾವನಾತ್ಮಕವಾಗಿ ಒಂದಾಗಿರಿಸುವ ಅತಿ ಮುಖ್ಯವಾದ ಅಂಶ. ಒಂದೇ ಮನೆಯಲ್ಲಿದ್ದು ದೂರವಾಗುವುದು ಸಹಜ. ಆದರೆ ಮಾತುಕತೆ, ಮನಸ್ಸಿನ ಹಂಚಿಕೆ, ಸಣ್ಣ ಸರ್ಪ್ರೈಸ್, ಪ್ರೀತಿಯ ನಗು ಎಲ್ಲವೂ ಸಂಬಂಧವನ್ನು ಇನ್ನು ಗಟ್ಟಿಯಾಗಿಸುತ್ತದೆ.

ಒಟ್ಟಿನಲ್ಲಿ, ದಾಂಪತ್ಯ ಬಾಂಧವ್ಯವೆಂದರೆ ಬೆಳೆಯಬೇಕಾದ ಒಂದು ಗಿಡದಂತೆ. ನಿತ್ಯವೂ ನೀರಾಡಿಸಿ, ಪ್ರೀತಿಯ ಬೆಳಕು ನೀಡಿದಾಗ ಮಾತ್ರ ಅದು ಹೂವಾಗಿ ಫಲ ನೀಡುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!