ಜೀವನದಲ್ಲಿ ಪ್ರತಿ ವ್ಯಕ್ತಿಯೂ ಯಾವುದೋ ಹಂತದಲ್ಲಿ ಒಂದು ಸಂಬಂಧದಲ್ಲಿ ಇರುತ್ತಾನೆ. ಪ್ರೀತಿಯ ಬಂಧಗಳು, ನಂಬಿಕೆ, ಆಪ್ತತೆ ಇವೆಲ್ಲವನ್ನೂ ಒಬ್ಬರಿಗೆ ಧಾರೆ ಎರೆದ ಮೇಲೆ ಬ್ರೇಕಪ್ ಆದಾಗ ಮನಸ್ಸಿಗೆ ತುಂಬಾ ನೋವಾಗೋದು ಸಹಜ. ಈ ಸಮಯದಲ್ಲಿ ಕೆಲವರು ಭಾವನಾತ್ಮಕವಾಗಿ ಮುರಿದು ಬೀಳುತ್ತಾರೆ, ತಾವು ಏನು ತಪ್ಪುಮಾಡಿದ್ದೆ ಎಂಬ ಆಲೋಚನೆಗಳಲ್ಲಿ ಮುಳುಗುತ್ತಾರೆ. ಆದರೆ ಪ್ರತಿಯೊಂದು ಅಂತ್ಯವೂ ಹೊಸ ಪ್ರಾರಂಭಕ್ಕೆ ದಾರಿ ಮಾಡಿಕೊಡುತ್ತೆ ಎಂಬ ಸತ್ಯವನ್ನ ನಾವು ಮರೆತೇ ಬಿಟ್ಟಿರುತ್ತೇವೆ.
ಬ್ರೇಕಪ್ ನ ಸಂದರ್ಭವನ್ನು ಕೇವಲ ನೋವು ಅಥವಾ ನಷ್ಟದ ದೃಷ್ಟಿಯಿಂದ ನೋಡದೇ, ಅದರಿಂದ ಪಾಠ ಕಲಿಯುವ, ಸ್ವತಃ ಬೆಳೆಯುವ ಹಾಗೂ ಹೊಸ ದಿಕ್ಕಿನಲ್ಲಿ ಮುನ್ನಡೆಯುವ ಅವಕಾಶವನ್ನಾಗಿ ಪರಿಗಣಿಸಿದರೆ ಅದು ನಮ್ಮ ವ್ಯಕ್ತಿತ್ವವನ್ನು ಇನ್ನಷ್ಟು ಬಲಪಡಿಸಬಲ್ಲದು. ಜೀವನದಲ್ಲಿಯ ಯಾವುದೆ ಸಂಕಷ್ಟವನ್ನೂ ನಾವು ಹೇಗೆ ಎದುರಿಸುತ್ತೇವೆ ಎಂಬುದರ ಮೇಲೆ ನಮ್ಮ ಯಶಸ್ಸು ಮತ್ತು ಸಂತೋಷ ನಿಂತಿರುತ್ತದೆ. ಈ ಕಾರಣಕ್ಕಾಗಿ ಬ್ರೇಕಪ್ ನಂತರವೂ ನಾವು ಧೈರ್ಯವಿಟ್ಟು ಮುಂದೆ ಸಾಗಬೇಕು.
ನಿಮ್ಮ ಆತ್ಮವಿಶ್ವಾಸವನ್ನು ಪುನರ್ ನಿರ್ಮಿಸಿ:
ಬ್ರೇಕಪ್ ನ ನಂತರ ಬಹುಷಃ ತಮಗೆ ತಾವು ಅಪರಾಧಿ ಎಂಬ ಭಾವನೆ ಬರುವ ಸಾಧ್ಯತೆ ಇದೆ. ಆದರೆ ಇದು ತಾತ್ಕಾಲಿಕ. ನಿಮ್ಮ ಶಕ್ತಿ, ಕೌಶಲ್ಯ ಮತ್ತು ವಿಶೇಷತೆಗಳನ್ನು ನೆನಪಿಸಿಕೊಳ್ಳಿ. ಹೊಸ ಹವ್ಯಾಸಗಳನ್ನು ಬೆಳೆಸಿ.
ನಿಮ್ಮ ಭಾವನೆಗಳನ್ನು ಒಪ್ಪಿಕೊಳ್ಳಿ:
ಖಿನ್ನತೆ, ಕೋಪ, ಅಸಹನೆ – ಎಲ್ಲವೂ ಸಹಜ. ಈ ಭಾವನೆಗಳನ್ನು ತಳ್ಳಿ ಹಾಕದೇ, ಒಪ್ಪಿಕೊಳ್ಳಿ. ಬರವಣಿಗೆ, ಸ್ನೇಹಿತರೊಡನೆ ಮಾತನಾಡುವುದು ಅಥವಾ ಥೆರಪಿ ಸಹ ಉಪಯುಕ್ತವಾಗಬಹುದು.
ಹೊಸ ಗುರಿಗಳನ್ನು ಇಟ್ಟುಕೊಳ್ಳಿ:
ಸಂಬಂಧವಿದ್ದಾಗ ತಮ್ಮ ವೈಯಕ್ತಿಕ ಗುರಿಗಳನ್ನು ಮರೆಯಬಹುದು. ಈಗ ನೀವು ಮತ್ತೆ ನಿಮ್ಮ ಕನಸುಗಳತ್ತ ಗಮನ ಹರಿಸಲು ಸಾಧ್ಯವಾಗುತ್ತದೆ – ಕರಿಯರ್, ಶಿಕ್ಷಣ ಅಥವಾ ಪ್ರವಾಸ ಇತ್ಯಾದಿಗಳ ಕಡೆ ಗಮನ ಕೊಡಿ.
ಪಾಠವನ್ನು ಕಲಿಯಿರಿ:
ಪ್ರತಿ ಸಂಬಂಧವೂ ಏನಾದರೂ ಕಲಿಸುತ್ತದೆ – ಏನು ಚೆನ್ನಾಗಿತ್ತು, ಏನು ತಪ್ಪಾಗಿತ್ತು ಎಂಬುದರ ವಿಶ್ಲೇಷಣೆ ಮಾಡಿ. ಇದರಿಂದ ಮುಂದಿನ ಬಾಳಲ್ಲಿ ಉತ್ತಮ ನಿರ್ಣಯಗಳನ್ನು ತೆಗೆದುಕೊಳ್ಳಬಹುದು.
ನಿಮ್ಮ ಆರೋಗ್ಯದತ್ತ ಗಮನಹರಿಸಿ:
ಮೆಂಟಲ್ ಹಾಗೂ ಫಿಸಿಕಲ್ ಆರೋಗ್ಯಕ್ಕಾಗಿಯೂ ಇದು ಉತ್ತಮ ಸಮಯ. ಯೋಗ, ವ್ಯಾಯಾಮ, ಸರಿಯಾದ ಆಹಾರ ನಿಮ್ಮ ಮನಸ್ಥಿತಿಗೆ ಧನಾತ್ಮಕ ಪರಿಣಾಮ ಬೀರುತ್ತವೆ.
ಧೈರ್ಯದಿಂದ ಮುನ್ನಡೆಯಿರಿ:
ಹಿಂದಿನ ಬಂಧನವನ್ನು ಬಿಡುವುದು ಕಷ್ಟವಾಗಬಹುದು. ಆದರೆ ನೀವು ಮುಂದೆ ಸಾಗದಿದ್ದರೆ ಹೊಸ ಅವಕಾಶಗಳು ಬರುವುದಿಲ್ಲ. ಹೊಸ ಸ್ನೇಹಗಳು, ಹೊಸ ಅನುಭವಗಳು ನಿಮ್ಮನ್ನು ಕಾಯುತ್ತಿವೆ.
ಹೀಗಾಗಿ, ಬ್ರೇಕಪ್ ಅನ್ನು ಅಂತ್ಯವಲ್ಲ, ಹೊಸ ಪ್ರಾರಂಭವೆಂದು ಪರಿಗಣಿಸಿ. ನಿಮ್ಮ ಜೀವನದ ಸುಂದರ ಅಧ್ಯಾಯ ಇನ್ನೂ ಬರಬೇಕಿದೆ ಎಂಬ ವಿಶ್ವಾಸವಿರಲಿ.