ಮದುವೆ ಅನ್ನೋದು ಒಂದು ಜವಾಬ್ದಾರಿ. ಇಲ್ಲಿ ಬಹಳಷ್ಟು ಹೊಂದಾಣಿಕೆ, ಹಲವು ರೀತಿಯ ಆಚರಣೆ, ಮಾತು, ವ್ಯತ್ಯಾಸ ಹೀಗೆ ಹಲವು ಭಿನ್ನತೆಗಳು ಕಂಡುಬರುತ್ತವೆ. ಹಾಗಿರುವಾಗ ಮದುವೆಗೂ ಮೊದಲು ಎರಡೂ ಕುಟುಂಬಗಳ ವಿಭಿನ್ನತೆ ಬಗ್ಗೆ ಮೊದಲೇ ಚರ್ಚಿಸಿ, ತಿಳಿದುಕೊಳ್ಳುವುದು ಉತ್ತಮ. ಇಲ್ಲವಾದರೆ ಮುಂದೆ ಕೆಲವೊಂದು ಸಮಸ್ಯೆಗಳು ಬರಬಹುದು. ಹಾಗಾದರೆ ಮದುವೆಗೂ ಮುನ್ನ ನೀವು ಯಾವೆಲ್ಲಾ ವಿಷಯಗಳನ್ನು ನಿಮ್ಮ ಸಂಗಾತಿ ಜೊತೆಗೆ ಮಾತನಾಡಬೇಕು ಎನ್ನುವ ಪ್ರಮುಖ ವಿಷಯಗಳು ಇಲ್ಲಿವೆ.
ವೈಯಕ್ತಿಕ ಸ್ವಾತಂತ್ರ್ಯ
ನಿಮಗೆ ಸ್ನೇಹಿತರೊಂದಿಗೆ ಸಮಯ ಕಳೆಯಲು, ಪುಸ್ತಕ ಓದಲು ಅಥವಾ ಬರೆಯಲು ಅಥವಾ ನಿಮ್ಮ ಇತರ ಆಸಕ್ತಿಯ ವಿಷಯಗಳನ್ನು ಮುಂದುವರೆಸಲು ಬಯಸುವಿರಾ? ಯಾವುದಾದರೂ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲು ಬಯಸುವಿರಾ ಎಂಬುದರ ಬಗ್ಗೆ ಪರಸ್ಪರ ಮಾತನಾಡಿ.
ಹಣಕಾಸು ಮತ್ತು ಹಣ ನಿರ್ವಹಣೆ
ನೀವಿಬ್ಬರೂ ಬಜೆಟ್, ಖರ್ಚು, ಉಳಿತಾಯ ಮತ್ತು ಸಾಲ ಹೀಗೆ ಹತ್ತು ಹಲವು ಹಣಕಾಸಿನ ಗುರಿಗಳ ಬಗ್ಗೆ ಚರ್ಚಿಸುವುದು ಉತ್ತಮ.
ವೃತ್ತಿ ಮತ್ತು ಕುಟುಂಬ ಜೀವನ ಸಮತೋಲನ
ನಿಮ್ಮ ವೃತ್ತಿಜೀವನವು ನಿಮ್ಮ ಸಂಬಂಧ ಮತ್ತು ಕುಟುಂಬ ಜೀವನದ ಮೇಲೆ ಪರಿಣಾಮ ಬೀರುತ್ತದೆ? ಕೆಲಸಕ್ಕಾಗಿ ಸ್ಥಳಾಂತರಗೊಳ್ಳಲು ಅಥವಾ ಕೆಲಸ ಬದಲಾಯಿಸಲು ಪರಸ್ಪರರಿಗೆ ಒಪ್ಪಿಗೆ, ಕೆಲಸ ಮತ್ತು ವೈಯಕ್ತಿಕ ಸಮಯವನ್ನು ಹೇಗೆ ಸಮತೋಲನಗೊಳಿಸುತ್ತೀರಿ ಎಂಬುದರ ಬಗ್ಗೆ ಪರಸ್ಪರರ ಅಭಿಪ್ರಾಯವನ್ನು ಕೇಳಿ.
ಭಿನ್ನಾಭಿಪ್ರಾಯ ಮತ್ತು ಪರಿಹಾರ
ಭಿನ್ನಾಭಿಪ್ರಾಯಗಳನ್ನು ನೀವಿಬ್ಬರೂ ಹೇಗೆ ನಿಭಾಯಿಸುತ್ತೀರಿ? ಸಂಘರ್ಷಗಳನ್ನು ಪರಿಹರಿಸಲು ನಿಮ್ಮ ನಿರೀಕ್ಷೆಗಳು ಏನು? ಎನ್ನುವುದರ ಕುರಿತು ಚರ್ಚಿಸಿ.
ಮಕ್ಕಳು ಮತ್ತು ಪಾಲನೆ
ನೀವಿಬ್ಬರೂ ಮಕ್ಕಳನ್ನು ಬಯಸುವಿರಾ? ಪೋಷಣೆಯ ಶೈಲಿ, ಶಿಸ್ತು ಮತ್ತು ಅವರ ಶಿಕ್ಷಣದ ಬಗ್ಗೆ ನಿಮ್ಮ ಅಭಿಪ್ರಾಯಗಳುನ್ನು ಹಂಚಿಕೊಳ್ಳಿ.