ಲವ್ ಅಂಡ್ ರಿಲೇಷನ್ಶಿಪ್ ಗಳ ಈ ಲೋಕದಲ್ಲಿ ಇತ್ತೀಚೆಗೆ ಹೊಸ ಟ್ರೆಂಡ್ ಒಂದು ಹುಟ್ಟಿಕೊಂಡಿದೆ ಅದುವೆ ಸಾಫ್ಟ್ ಲಾಂಚ್ ರಿಲೇಷನ್ಶಿಪ್. ಖಾಸಗಿ ಬದುಕನ್ನು ಸಾರ್ವಜನಿಕ ಗಮನದಿಂದ ದೂರವಿಡುವ ಈ ರೀತಿಯ ಪ್ರೀತಿಯ ಸಂಬಂಧ ಪರಿಚಯ ಇದೀಗ ಯುವಜನತೆಯಲ್ಲಿ ವಿಶಿಷ್ಟ ರೀತಿಯ ಕ್ರೇಜ್ ಆಗಿದೆ. ಬಾಲಿವುಡ್ ನ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ತಮ್ಮ ಸಂಬಂಧವನ್ನು ಬಹಿರಂಗಪಡಿಸುವ ಮುನ್ನ ಇದೇ ರೀತಿಯ ಸಾಫ್ಟ್ ಲಾಂಚ್ ಮೂಲಕ ಪ್ರೇಮ ಹಂಚಿಕೊಂಡಿದ್ದರು ಎನ್ನಲಾಗುತ್ತದೆ.
ಏನು ಈ ಸಾಫ್ಟ್ ಲಾಂಚ್ ರಿಲೇಷನ್ಶಿಪ್?
ಸಾಧಾರಣವಾಗಿ ಯಾವುದೇ ಹೊಸ ಬಾಂಧವ್ಯವನ್ನು ಜಗತ್ತಿಗೆ ಪರಿಚಯ ಮಾಡುವಾಗ, ಪ್ರೇಮಿಗಳು ತಮ್ಮ ಸಂಗಾತಿಯ ಪರಿಚಯವನ್ನು ಪೂರ್ಣವಾಗಿ ಬಹಿರಂಗ ಪಡಿಸುತ್ತಾರೆ. ಆದರೆ ಸಾಫ್ಟ್ ಲಾಂಚ್ ರಿಲೇಷನ್ಶಿಪ್‌ನಲ್ಲಿ ಪ್ರೀತಿಯ ಬಗ್ಗೆ ತೋರಿಸುತ್ತಾರೆ ಆದರೆ ಸಂಗಾತಿಯ ಗುರುತು ಬಹಿರಂಗಪಡಿಸೋದಿಲ್ಲ. ಇಲ್ಲಿ ನೀವು ಪ್ರೀತಿಸಿದ ವ್ಯಕ್ತಿಯನ್ನು ಯಾರಿಗೂ ತೋರಿಸುವಂತಿಲ್ಲ. ಆದರೆ ಅವರ ಕೈ, ಭುಜ ಅಥವಾ ತಲೆ ಭಾಗಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಬಹುದು. ಆದರೆ ಅವರ ಮುಖವನ್ನು ಯಾರಿಗೂ ಪ್ರದರ್ಶಿಸುವಂತಿಲ್ಲ.
ಹೀಗೆ ಮಾಡಲಾಗುತ್ತದೆ ಸಾಫ್ಟ್ ಲಾಂಚ್:
ಮಸುಕು ಫೋಟೋಗಳು: ಸಂಗಾತಿಯ ಕೈ, ಭುಜ, ಅಥವಾ ಬೆನ್ನು ಭಾಗವನ್ನಷ್ಟೇ ತೋರಿಸುವ ಫೋಟೋಗಳನ್ನು ಹಂಚಿಕೊಳ್ಳಲಾಗುತ್ತದೆ. ಮುಖ ಭಾಗವನ್ನು ಹೂವು, ಎಮೋಜಿ ಅಥವಾ ಮಸುಕು ಎಡಿಟ್‌ನಿಂದ ಮುಚ್ಚಲಾಗುತ್ತದೆ.
ತಬ್ಬಿಕೊಂಡಿರುವ ಫೋಟೋ: ಪ್ರೇಮಿ/ಪ್ರೇಯಸಿಯನ್ನು ತಬ್ಬಿಕೊಳ್ಳುವ ಫೋಟೋ, ಆದರೆ ಇಬ್ಬರಲ್ಲೊಬ್ಬರ ಮುಖ ಮಾತ್ರ ಕಂಡುಬರುವಂತಹದಾಗಿರುತ್ತದೆ. ಈ ಮೂಲಕ ಸಂಬಂಧದ ಬಗ್ಗೆ ಊಹೆ ಹುಟ್ಟಿಸುವ ಸಾಧ್ಯತೆ ಹೆಚ್ಚು.
ಕೈ ಹಿಡಿದು ನಡೆವ ದೃಶ್ಯ: ಉದ್ಯಾನವನ ಅಥವಾ ರಸ್ತೆಯಲ್ಲಿ ಇಬ್ಬರೂ ಕೈ ಹಿಡಿದು ನಡೆಯುತ್ತಿರುವ ವಿಡಿಯೋ ಅಥವಾ ಫೋಟೋ ಶೇರ್ ಮಾಡಲಾಗುತ್ತದೆ. ಆದರೆ ಸಂಗಾತಿಯ ಮುಖ ಮಾತ್ರ ಗುಪ್ತವಾಗಿರುತ್ತದೆ.
ಊಟದ ಟೇಬಲ್ ಫೋಟೋ: ಜೊತೆಯಲ್ಲಿ ಕುಳಿತುಕೊಂಡಿರುವ ಅಥವಾ ಕೈ ಹಿಡಿದು ಕುಳಿತಿರುವ ಚಿತ್ರ. ಇಲ್ಲಿಯೂ ಸಂಗಾತಿಯ ಮುಖ ಹಾರ್ಟ್ ಅಥವಾ ಸ್ಟಿಕರ್‌ಗಳಿಂದ ಮುಚ್ಚಲ್ಪಟ್ಟಿರುತ್ತದೆ.
ಭುಜದ ಮೇಲೆ ತಲೆ: ಹುಡುಗಿಯು ಹುಡುಗನ ಭುಜದ ಮೇಲೆ ತಲೆ ಇಟ್ಟುಕೊಂಡಿರುವ ಫೋಟೋ ಪೋಸ್ಟ್ ಮಾಡುವುದು ಸಹ ಈಗ ಸಾಫ್ಟ್ ಲಾಂಚ್‌ನ ಅತ್ಯಂತ ಪ್ರಚಲಿತ ಶೈಲಿ.
ಇದು ಯಾಕೆ ಜನಪ್ರಿಯ?
ಈ ಶೈಲಿ ಖಾಸಗಿತ್ವ ಉಳಿಸಿಕೊಳ್ಳಲು ಇಚ್ಛಿಸುವ ಪ್ರೇಮಿಗಳಿಗೆ ಸೂಕ್ತ. ಯಾವುದೇ ಅನಗತ್ಯ ಚರ್ಚೆ ಅಥವಾ ತೀರ್ಪುಗಳಿಂದ ದೂರವಿದ್ದು, ತಮ್ಮ ಪ್ರೀತಿಯ ಸಂಬಂಧವನ್ನು ಸ್ಮಾರ್ಟ್‌ವಾಗಿ ಮತ್ತು ನಿಖರವಾಗಿ ಎಲ್ಲರೊಂದಿಗೆ ಹಂಚಿಕೊಳ್ಳುವ ವಿಧಾನವಿದು. ಸಾಮಾಜಿಕ ಜಾಲತಾಣಗಳ ಈ ಯುಗದಲ್ಲಿ, ಇದು ಹೊಸದಾಗಿ ಮೂಡಿಬರುತ್ತಿರುವ ‘ಲವ್ ಲಾಂಚ್’ ಪದ್ದತಿಯಾಗಿದೆ.