ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದ ಮಹತ್ವದ ತಿರುವು. ಈ ಹಂತದಲ್ಲಿ ಯಾರನ್ನು ಜೀವನ ಸಂಗಾತಿಯಾಗಿ ಆಯ್ಕೆ ಮಾಡುತ್ತೇವೆ ಎಂಬುದರ ಮೇಲೆ ಭವಿಷ್ಯದ ಸುಖ-ದುಃಖಗಳು ಅವಲಂಬಿತವಾಗಿರುತ್ತವೆ. ಕೆಲವೊಮ್ಮೆ ಪರಿಚಯದ ವ್ಯಕ್ತಿಯನ್ನೇ ಮದುವೆಯಾಗುವ ನಿರ್ಧಾರ ಕೈಗೊಳ್ಳಲಾಗುತ್ತದೆ. ಆದರೆ ಅದಕ್ಕೂ ಮುನ್ನ ಆ ವ್ಯಕ್ತಿಯ ಸ್ವಭಾವ, ಗುಣ, ನಂಬಿಕೆ ಮತ್ತು ಭವಿಷ್ಯದ ಗುರಿಗಳ ಬಗ್ಗೆ ಸ್ಪಷ್ಟತೆ ಹೊಂದುವುದು ಅಗತ್ಯ. ತಪ್ಪು ನಿರ್ಧಾರವು ಜೀವನಪೂರ್ತಿ ಪಶ್ಚಾತ್ತಾಪಕ್ಕೆ ಕಾರಣವಾಗಬಹುದು.
ಖುಷಿಯಾಗಿ ನೋಡಿಕೊಳ್ಳುವ ಗುಣ
ಸ್ನೇಹ ಅಥವಾ ಪ್ರೇಮದ ಹಂತದಲ್ಲಿ ಜೀವನ ಬೇರೆ ರೀತಿ ಕಾಣುತ್ತದೆ. ಆದರೆ ಮದುವೆಯ ನಂತರ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಸಂಗಾತಿ ನಿಮ್ಮ ಸುಖ-ದುಃಖಗಳಲ್ಲಿ ಜೊತೆಯಾಗಿ ನಿಂತು, ಪ್ರೀತಿ ಮತ್ತು ಕಾಳಜಿಯಿಂದ ನೋಡಿಕೊಳ್ಳುವ ಗುಣ ಹೊಂದಿರಬೇಕಾಗಿದೆ. ಈ ಗುಣವಿದ್ದಲ್ಲಿ ಆ ವ್ಯಕ್ತಿಯೊಂದಿಗೆ ಜೀವನ ಸುಖಕರವಾಗಿರಲು ಹೆಚ್ಚಿನ ಸಾಧ್ಯತೆ ಇರುತ್ತದೆ.
ನಂಬಿಕೆ ಮತ್ತು ಪ್ರಾಮಾಣಿಕತೆ
ವೈವಾಹಿಕ ಜೀವನದ ಆಧಾರ ನಂಬಿಕೆ. ಸಂಗಾತಿ ಪ್ರಾಮಾಣಿಕರಾಗಿರುವುದು ದಾಂಪತ್ಯದ ಬಲವಾದ ಅಡಿಪಾಯ. ಒಂದು ವೇಳೆ ಆ ವ್ಯಕ್ತಿ ನಂಬಿಕೆಗೂ, ಪ್ರಾಮಾಣಿಕತೆಗೂ ಅರ್ಹರಾದರೆ, ಅವರೊಂದಿಗೆ ಜೀವನ ಸಾಗಿಸುವುದು ಭದ್ರ ಮತ್ತು ಸಂತೋಷಕರವಾಗಿರುತ್ತದೆ.
ಬೆಂಬಲ ನೀಡುವ ಮನೋಭಾವ
ಜೀವನದಲ್ಲಿ ಪ್ರತಿಯೊಬ್ಬರಿಗೂ ಬೆಂಬಲ ಅಗತ್ಯ. ಸಣ್ಣ ವಿಷಯಗಳಲ್ಲೂ ಸಹ ಬೆಂಬಲ ನೀಡುವ ಮನೋಭಾವ ಹೊಂದಿರುವ ಸಂಗಾತಿ, ಕಷ್ಟದ ಸಮಯದಲ್ಲಿ ಧೈರ್ಯ ತುಂಬುವವರಾಗಿರುತ್ತಾರೆ. ಮದುವೆಗೆ ಮುನ್ನವೇ ಆ ವ್ಯಕ್ತಿ ನಿಮಗೆ ಹೇಗೆ ಬೆಂಬಲ ನೀಡುತ್ತಾರೆ ಎಂಬುದನ್ನು ಗಮನಿಸುವುದು ಸೂಕ್ತ.
ಗುರಿಗಳ ಹೊಂದಾಣಿಕೆ
ಮದುವೆಯ ನಂತರ ಇಬ್ಬರ ಜೀವನದ ಗುರಿಗಳು ಹೊಂದಾಣಿಕೆಯಾಗದಿದ್ದರೆ ಸಮಸ್ಯೆಗಳು ಎದುರಾಗಬಹುದು. ಸ್ವಂತ ಮನೆ, ಉಳಿತಾಯ, ಹೂಡಿಕೆ, ವೃತ್ತಿಜೀವನದ ಯೋಜನೆ ಇಂತಹ ವಿಷಯಗಳಲ್ಲಿ ಸಂಗಾತಿಯ ಗುರಿ ನಿಮಗೆ ಹೊಂದಿಕೊಂಡಿದ್ದರೆ, ದಾಂಪತ್ಯ ಜೀವನದಲ್ಲಿ ಸಹಕಾರ ಹೆಚ್ಚುತ್ತದೆ.
ಮದುವೆ ಒಂದು ಭಾವನಾತ್ಮಕ ಹಾಗೂ ಜವಾಬ್ದಾರಿಯುತ ನಿರ್ಧಾರ. ಸಂಗಾತಿಯ ವ್ಯಕ್ತಿತ್ವ, ನಂಬಿಕೆ, ಬೆಂಬಲ ಹಾಗೂ ಭವಿಷ್ಯದ ದೃಷ್ಟಿಕೋನಗಳನ್ನು ಪರಿಗಣಿಸಿದಾಗ ಮಾತ್ರ ಸರಿಯಾದ ಆಯ್ಕೆ ಸಾಧ್ಯ.