ಇಂದಿನ ಆಧುನಿಕ ಕುಟುಂಬಗಳಲ್ಲಿ, ಪತಿ-ಪತ್ನಿ ನಡುವಿನ ಸಂಬಂಧ ದೀರ್ಘಕಾಲ ಪ್ರೀತಿ, ಗೌರವ ಮತ್ತು ಶ್ರದ್ಧೆಯೊಂದಿಗೆ ಉಳಿಯಬೇಕೆಂಬುದು ಎಲ್ಲರ ಬಯಕೆ. ಆದರೆ ಜೀವನದ ಸಂಘರ್ಷದ ನಡುವೆ ಪ್ರೀತಿ ಕಮ್ಮಿಯಾಗುವ, ಅರ್ಥಮಾಡಿಕೊಳ್ಳುವಿಕೆ ಕುಗ್ಗುವ ಸಂದರ್ಭಗಳು ಸಾಮಾನ್ಯ. ಅದನ್ನು ತಡೆಯಲು ಗಂಡಂದಿರು ಕೆಲವು ಸಣ್ಣ ಆದರೆ ಪ್ರಭಾವಶೀಲ ಅಭ್ಯಾಸಗಳನ್ನು ರೂಢಿಸಿಕೊಂಡರೆ, ತಮ್ಮ ಹೆಂಡತಿಯ ಹೃದಯದಲ್ಲಿ ಸದಾ ಸ್ಥಾನ ಪಡೆಯಬಹುದು.
ಒಳ್ಳೆಯ ಸ್ನೇಹಿತನಾಗಿ
ಹೆಂಡತಿಯೊಂದಿಗಿನ ಸಂಬಂಧದ ಮೂಲ ಆಧಾರ ಸ್ನೇಹವಾಗಬೇಕು. ಪತಿಯು ತನ್ನ ಪತ್ನಿಗೆ ಒಬ್ಬ ಒಳ್ಳೆಯ ಸ್ನೇಹಿತನಂತೆ ನಡೆದುಕೊಂಡಾಗ, ಪತ್ನಿಯು ತನ್ನ ಭಾವನೆಗಳು, ಕನಸುಗಳು ಮತ್ತು ಚಿಂತೆಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಾಳೆ. ಇದು ಇಬ್ಬರ ನಡುವಿನ ನಂಬಿಕೆಯನ್ನು ಗಟ್ಟಿಗೊಳಿಸುತ್ತದೆ.
ಮನೆಕೆಲಸಗಳಲ್ಲಿ ಸಹಾಯ ಮಾಡಿ
ಇಂದಿನ ಕಾಲದಲ್ಲಿ ಪತ್ನಿಯ ಮೇಲೆ ಮಾತ್ರ ಮನೆಯ ಜವಾಬ್ದಾರಿಗಳನ್ನುಹಾಕುವುದು ಸರಿಯಲ್ಲ. ಪತಿಯು ಸಹ ಸರಳವಾಗಿ ಪಾತ್ರೆ ತೊಳೆಯುವುದು, ಮಕ್ಕಳಿಗೆ ಊಟ ಮಾಡಿಸುವಂತಹ ಕೆಲಸಗಳಲ್ಲಿ ಕೈಜೋಡಿಸಿದರೆ ಅದು ಹೆಂಡತಿಯ ಮೆಚ್ಚುಗೆಗೂ ಕಾರಣವಾಗುತ್ತದೆ ಮತ್ತು ಸಂಬಂಧ ಇನ್ನಷ್ಟು ಗಾಢವಾಗುತ್ತದೆ.
ಪತ್ನಿಯ ಮಾತು ಕೇಳಿ, ಅರ್ಥಮಾಡಿಕೊಳ್ಳಿ
ಅವಳ ಮಾತು ಕೇಳುವುದಷ್ಟೇ ಅಲ್ಲ, ಆಕೆಯ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪತಿಯು ಯತ್ನಿಸಬೇಕು. ಹೆಂಡತಿ ಮಾತನಾಡುತ್ತಿರುವಾಗ ಮೊಬೈಲ್ ಕಡೆ ನೋಡಿ ತಲೆ ಅಲ್ಲಾಡಿಸುವ ಬದಲು, ನಿಜವಾದ ಆಸಕ್ತಿಯಿಂದ ಆಲಿಸಬೇಕು. ಇದರಿಂದ ಆಕೆ ತನ್ನ ಮಾತಿಗೆ ಬೆಲೆ ಇದೆ ಎಂಬ ಭಾವನೆ ಹೊಂದುತ್ತಾಳೆ.
ಲುಕ್ ಬಗ್ಗೆ ಕಾಳಜಿ ವಹಿಸಿ
ಬಹುಮಂದಿ ಗಂಡಸರು ಮದುವೆಯಾದ ಬಳಿಕ ತಾವು ಹೇಗೆ ಕಾಣಿಸುತ್ತಿದ್ದೇವೆ ಎಂಬ ವಿಷಯಕ್ಕೆ ಅಷ್ಟಾಗಿ ಕಾಳಜಿ ತೋರಿಸುವುದಿಲ್ಲ. ಆದರೆ ಪತ್ನಿಗೆ, ತನ್ನ ಗಂಡನು ನಲುವತ್ತಾದರೂ ಸುಂದರವಾಗಿದ್ದಾನೆ ಅನ್ನಿಸಬೇಕು. ಅಂದಕ್ಕಾಗಿ ಆರೋಗ್ಯಕರ ಜೀವನಶೈಲಿ, ಸ್ವಚ್ಛತೆ ಮತ್ತು ಸೊಗಸಾದ ಉಡುಗೆ ಸಹ ಪ್ರೀತಿಯ ಅಂಶಗಳಾಗುತ್ತವೆ.
ಪತ್ನಿಯ ಕನಸುಗಳಿಗೆ ಬೆಂಬಲ ನೀಡಿ
ಹೆಂಡತಿಯ ಕನಸುಗಳು ಮರೆಮಾಚುವಂತಿಲ್ಲ. ಅವಳ ಉದ್ದೇಶಗಳಿಗೆ, ಉತ್ಸಾಹಕ್ಕೆ ಬೆನ್ನುಹತ್ತುವ ಗಂಡನು ನಿಜವಾದ ಸಂಗಾತಿ. ಗಂಡನ ಬೆಂಬಲದಿಂದ ಹೆಂಡತಿಯು ಹೆಚ್ಚು ಆತ್ಮವಿಶ್ವಾಸದಿಂದ ಬದುಕಿನಲ್ಲಿ ಮುನ್ನಡೆಯುತ್ತಾಳೆ.
ನ್ಯೂನ್ಯತೆಗಳನ್ನು ಸಹಿಸಿಕೊಂಡು ಪ್ರೋತ್ಸಾಹ ನೀಡಿ
ಪ್ರತಿಯೊಬ್ಬರಲ್ಲೂ ಕೆಲವೊಂದು ನ್ಯೂನ್ಯತೆಗಳು ಇರುತ್ತವೆ. ಪತ್ನಿಯ ಬಗ್ಗೆಯೂ ಹೀಗೆಯೇ. ಅವಳ ತಪ್ಪುಗಳನ್ನು ತೋರಿಸದೆ, ಅವಳಲ್ಲಿರುವ ಒಳ್ಳೆಯ ಗುಣಗಳನ್ನು ಮೆಚ್ಚಿ, ಪ್ರೋತ್ಸಾಹ ನೀಡಬೇಕು. ಇದು ಆಕೆಯಲ್ಲಿನ ಆತ್ಮವಿಶ್ವಾಸವನ್ನು ಹೆಚ್ಚಿಸಿ, ಗಂಡನ ಮೇಲೆ ಮತ್ತಷ್ಟು ಪ್ರೀತಿಯನ್ನು ಹುಟ್ಟಿಸುತ್ತದೆ.
ಇಂತಹ ಅಭ್ಯಾಸಗಳನ್ನು ರೂಢಿಸಿಕೊಂಡು ಗಂಡಸರು ತಮ್ಮ ಮನೆಗೆ ಶಾಂತಿ, ನೆಮ್ಮದಿ ಮತ್ತು ನಿಜವಾದ ಬಾಂಧವ್ಯವನ್ನು ತರುವ ಸಾಧ್ಯತೆ ಹೆಚ್ಚಿಸಬಹುದು.