ಹೊಸದಿಗಂತ ವರದಿ ರಾಮನಗರ:
ಬರ ಪರಿಹಾರ ಕಾರ್ಯಕ್ರಮಗಳ ಪರಿಹಾರಕ್ಕೆ ಈಗಾಗಲೇ ಜಿಲ್ಲಾಡಳಿತಕ್ಕೆ ಸರಕಾರ ಹಣ ಬಿಡುಗಡೆ ಮಾಡಲಾಗಿದೆ. ಬರ ನಿರ್ವಹಣೆಗಾಗಿ ಕೇಂದ್ರ ಸರ್ಕಾರಕ್ಕೆ, ರಾಜ್ಯ ಸರ್ಕಾರ ಮನವಿ ಮಾಡಿದರೂ ಸ್ಪಂದಿಸಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಹಾರೋಹಳ್ಳಿ ಪಟ್ಟಣದಲ್ಲಿ ಬುಧವಾರ ನಡೆದ ತಾಲ್ಲೂಕಿನ ಬರಪೀಡಿತ ಪ್ರದೇಶಗಳ ವೀಕ್ಷಣೆ ಮತ್ತು ರೈತರ ಜೊತೆ ಸಮಾಲೋಚನೆ ಕಾರ್ಯಕ್ರಮದಲ್ಲಿ ಮಾತಾನಾಡಿದ ಅವರು, ರಾಜ್ಯ ಸರ್ಕಾರ ಸದಾ ರೈತರ ಪರವಾಗಿರಲಿದೆ. ಅನ್ನದಾತರ ಸಮಸ್ಯೆಗಳಿಗೆ ಸ್ಪಂದಿಸುವ ಜೊತೆಗೆ, ಹೊಸ ತಾಲ್ಲೂಕು ಹಾರೋಹಳ್ಳಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು.
ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಮಾತನಾಡಿ, ನಾವೆಲ್ಲರೂ ರೈತಾಪಿ ವರ್ಗದವರು. ರೇಷ್ಮೆ ಮತ್ತು ಹಾಲು ಉತ್ಪಾದನೆಯೇ ನಮ್ಮ ಬದುಕಿಗೆ ಆಧಾರ. ಹಾರೋಹಳ್ಳಿ ಹಲವು ವಿಷಯದಲ್ಲಿ ರೀತಿಯಲ್ಲಿ ಹಿಂದುಳಿದಿದೆ. ತಾಲ್ಲೂಕು ಕಚೇರಿಗಳು, ಆಸ್ಪತ್ರೆ, ಶಾಲಾ- ಕಾಲೇಜು ಸೇರಿದಂತೆ ಮೂಲಸೌಕರ್ಯಗಳಿಂದ ತಾಲ್ಲೂಕು ವಂಚಿತವಾಗಿದೆ. ಕೈಗಾರಿಕಾ ಪ್ರದೇಶವಿದ್ದರೂ ಜನ ಇಂದಿಗೂ ತಮ್ಮ ಕಸುಬನ್ನೇ ಅಬಲಂಬಿಸಿದ್ದಾರೆ. ಬರದಿಂದ ತತ್ತರಿಸಿರುವ ಅವರ ನೆರವಿಗೆ ಸರ್ಕಾರ ಬರಬೇಕು ಎಂದು ಒತ್ತಾಯಿಸಿದರು.
ಪಟ್ಟಣದ ಪುರಾತನ ಅರುಣಾಚಲ ಮತ್ತು ಚಾಮುಂಡೇಶ್ವರಿ ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ಇದೇ ಸಂದರ್ಭದಲ್ಲಿ ಹುಸೇನ್ ಮನವಿ ಮಾಡಿದರು.
ನಿಮ್ಮ ಪರಿಹಾರ ಯಾವುದಕ್ಕೂ ಸಾಲುತ್ತಿಲ್ಲ
ಇದೇ ಸಂದರ್ಭದಲ್ಲಿ ಕೆಲ ರೈತರು ತಮ್ಮ ಅಲಲು ತೋಡಿಕೊಡಿದ್ದು. ಬೆಳೆ ವಿಮೆ ಸೇರಿದಂತೆ ರೈತರಿಗೆ ಸಿಗುವ ಸವಲತ್ತುಗಳು ರೈತರಿಗೆ ಸರಿಯಾಗಿ ತಲುಪುತ್ತಿಲ್ಲ. ಮೇವು ಸರಿಯಾಗಿ ಸಿಗುತ್ತಿಲ್ಲ. ವಿವಿಧ ಇಲಾಖೆಗಳಿಂದ ರೈತರಿಗೆ ಸಿಗುವ ಸವಲತ್ತುಗಳ ಕುರಿತು ಹೆಚ್ಚಿನ ಜಾಗೃತಿ ಮಾಡಿಸಬೇಕು ಎಂದು ಆಗ್ರಹಿಸಿದರು.
ಟೊಮ್ಯಾಟೊ ಬೆಳೆದಿದ್ದೆ. ಮಳೆ ಕೊರತೆಯಿಂದ ಬೆಳೆ ಕೈ ಕೊಟ್ಟಿದೆ. ಸೂಕ್ತ ಪರಿಹಾರ ಕೊಡಿ ಎಂದು ರೈತ ಮಲ್ಲಪ್ಪ ಮನವಿ ಮಾಡಿದರು. ಬಿತ್ತನೆ ಮಾಡಿದ್ದರೂ ಮಳೆ ಇಲ್ಲದೆ ಬೆಳೆ ಗ್ಯಾರಂಟಿ ಇಲ್ಲ. ನೀವು ಕೊಡುವ ಬರ ಪರಿಹಾರ ಚೆಕ್ ಕೇವಲ ₹100, ₹150, ಹೆಚ್ಚಿಗೆ ಎಂದರೆ ₹500 ಕೊಟ್ಟರೆ ದೊಡ್ಡದು. ಇದು ಏನಕ್ಕೂ ಸಾಲದು. ಬೆಳೆಹಾನಿ ಮತ್ತು ಬರ ಪರಿಹಾರವು ರೈತರ ನಷ್ಟ ತುಂಬಿಕೊಡುವಂತಿರಬೇಕು ಎಂದು ರೈತ ರಾಮಚಂದ್ರ ಸಚಿವರನ್ನು ತರಾಟೆಗೆ ತೆಗೆದುಕೊಂಡರು.