ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೊಂಜಿ ಯೋಜನೆಯಲ್ಲಿ ಹಣ ಕಳೆದುಕೊಂಡ ಠೇವಣಿದಾರರಿಗೆ ಪರಿಹಾರ ನೀಡಲು ಕರ್ನಾಟಕ ಸರ್ಕಾರವು ಐ ಮಾನಿಟರಿ ಅಡ್ವೈಸರಿ (ಐಎಂಎ) ಆಸ್ತಿಗಳನ್ನು ಹರಾಜು ಹಾಕಲು ನಿರ್ಧರಿಸಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.
ಕರ್ನಾಟಕ ಹೈಕೋರ್ಟ್ ನೀಡಿದ ನಿರ್ದೇಶನಗಳ ಆಧಾರದ ಮೇಲೆ ಐಎಂಎಯ ಆಸ್ತಿಗಳನ್ನು ಶೀಘ್ರದಲ್ಲೇ ಹರಾಜು ಮಾಡಲಾಗುತ್ತದೆ. ರಂಜಾನ್ ಮುನ್ನ ಹಣ ಕಳೆದುಕೊಂಡ ಎಲ್ಲಾ ಠೇವಣಿದಾರರಿಗೆ ಪರಿಹಾರ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಐಎಂಎ ಠೇವಣಿದಾರರಿಗೆ ಲಾಭಾಂಶವನ್ನು ಪಾವತಿಸುವುದನ್ನು ನಿಲ್ಲಿಸಿದ ನಂತರ 2019 ರಲ್ಲಿ ಈ ಹಗರಣ ಬೆಳಕಿಗೆ ಬಂದಿತ್ತು. ನಂತರ ತನ್ನ ಎಲ್ಲ ಕಚೇರಿಗಳನ್ನು ಮುಚ್ಚಿ ಅದರ ಒಡೆತನದ ಹಲವಾರು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು. ವಶಪಡಿಸಿಕೊಂಡ ಚರಾಸ್ತಿಗಳ ಅಂದಾಜು ಮೌಲ್ಯ 106.92 ಕೋಟಿ ರೂ.ಗಳಾಗಿದ್ದರೆ, ಸ್ಥಿರ ಆಸ್ತಿಗಳ ಮೌಲ್ಯ 401.92 ಕೋಟಿ ರೂ.ಗಳಷ್ಟಿದೆ ಎಂದು ಸಚಿವರು ಹೇಳಿದ್ದಾರೆ.
ಐಎಂಎ ಸಂಸ್ಥಾಪಕ ಮೊಹಮ್ಮದ್ ಮನ್ಸೂರ್ ಖಾನ್ ತಮ್ಮ ಯೋಜನೆಗಳು ಇಸ್ಲಾಮಿಕ್ ತತ್ವಗಳಿಗೆ ಅನುಗುಣವಾಗಿವೆ ಎಂದು ಪ್ರಚಾರ ಮಾಡುವ ಮೂಲಕ ಒಟ್ಟು ರೂ 3,213.58 ಕೋಟಿ ಹೂಡಿಕೆ ಗಳಿಸಿದ್ದರು.