ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ಖ್ಯಾತ ನಟ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದು ಕರೆಯಲ್ಪಡುವ ಅಮೀರ್ ಖಾನ್, ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಜೀವನದಿಂದ ಸದಾ ಸುದ್ದಿಯಲ್ಲಿರುವ ವ್ಯಕ್ತಿ. ಇತ್ತೀಚೆಗಷ್ಟೇ ಬಿಡುಗಡೆಯಾದ ಅವರ ಹೊಸ ಸಿನಿಮಾ ಸೀತಾರೆ ಜಮೀನ್ ಪರ್ ಯಶಸ್ವಿಯಾಗಿ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿರುವ ಸಂದರ್ಭದಲ್ಲಿ, ನಟ ಧರ್ಮ, ನಂಬಿಕೆ ಮತ್ತು ಶ್ರೀಕೃಷ್ಣನ ಪಾತ್ರದ ಕುರಿತಾಗಿ ತಮ್ಮ ಆಸೆಗಳನ್ನು ಹಂಚಿಕೊಂಡಿದ್ದಾರೆ.
ಖಾಸಗಿ ಮಾಧ್ಯಮದ ಜೊತೆ ಮಾತನಾಡಿದ ಅಮೀರ್, “ನಾನು ಯಾರನ್ನಾದರೂ ಭೇಟಿಯಾದಾಗ ಅವರು ಯಾವ ಧರ್ಮಕ್ಕೆ ಸೇರಿದ್ದಾರೆ ಎನ್ನುವುದು ನಾನು ನೋಡುವುದಿಲ್ಲ. ನಾನು ಅವರಿಗೆ ವ್ಯಕ್ತಿಯಾಗಿ ಹೇಗಿದ್ದಾರೋ ಅದನ್ನು ಮಾತ್ರ ಗಮನಿಸುತ್ತೇನೆ” ಎಂದು ಸ್ಪಷ್ಟಪಡಿಸಿದರು. ಧರ್ಮವು ಅಪಾಯಕಾರಿ ವಿಷಯವಾಗಿರುವುದರಿಂದ, ಅದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂಬ ಅಭಿಪ್ರಾಯವನ್ನೂ ಅವರು ಈ ಸಂದರ್ಭದಲ್ಲೇ ವ್ಯಕ್ತಪಡಿಸಿದರು.
ಅಮೀರ್ ತಮ್ಮ ಮಾತು ಮುಂದುವರೆಸುತ್ತಾ, “ಎಲ್ಲಾ ಧರ್ಮಗಳನ್ನೂ ಗೌರವಿಸುತ್ತೇನೆ. ಪ್ರತಿಯೊಬ್ಬರೂ ತಮ್ಮ ಧರ್ಮವನ್ನು ಅನುಸರಿಸುವ ಹಕ್ಕು ಹೊಂದಿದ್ದಾರೆ. ನಾನು ಗುರು ನಾನಕ್ ಅವರ ಬೋಧನೆಗಳಿಂದ ಪ್ರೇರಿತನಾಗಿದ್ದೇನೆ. ಸುಚೇತಾ ಭಟ್ಟಾಚಾರ್ಯಿ ಎಂಬ ಗುರುವಿನಿಂದ ನಾನು ಹಲವಾರು ವಿಷಯಗಳನ್ನು ಕಲಿತಿದ್ದೇನೆ” ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ, ಅಮೀರ್ ಖಾನ್ ಅವರು ಬಿಗ್ ಸ್ಕ್ರೀನ್ ಮೇಲೆ ಶ್ರೀಕೃಷ್ಣನ ಪಾತ್ರವನ್ನು ನಿರ್ವಹಿಸುವ ಆಸೆ ಹೊಂದಿರುವುದನ್ನೂ ಬಹಿರಂಗಪಡಿಸಿದರು. “ಕೃಷ್ಣನು ತುಂಬಾ ಆಳವಾದ ತತ್ವಶಾಸ್ತ್ರವನ್ನು ಹೊಂದಿರುವ ವ್ಯಕ್ತಿ. ಅವನ ಜೀವನ ಮತ್ತು ಭಗವದ್ಗೀತೆ ನಮಗೆ ಅನೇಕ ಪಾಠಗಳನ್ನು ಕಲಿಸುತ್ತವೆ. ಅವನ ವ್ಯಕ್ತಿತ್ವ ಅತ್ಯಂತ ಸಂಪೂರ್ಣವಾದದ್ದು. ಅವನ ಪಾತ್ರ ನಿರ್ವಹಿಸಲು ನನಗೆ ಅವಕಾಶ ದೊರಕಲಿ ಎಂಬ ಆಸೆ ನನ್ನದು” ಎಂದು ಅವರು ಹೇಳಿದರು.