ಜ್ಞಾನವಾಪಿಯಲ್ಲಿ ಮೂರ್ತಿಗಳ ಅವಶೇಷ ಪತ್ತೆ: ಸರ್ವೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜ್ಞಾನವಾಪಿ ಪರಿಸರದಲ್ಲಿ 17ನೇ ಶತಮಾನಕ್ಕೂ ಮುನ್ನವೇ ಅಸ್ತಿತ್ವದಲ್ಲಿದ್ದ ಹಿಂದು ದೇವಾಲಯವನ್ನು ಕೆಡವಿ, ಅದರ ಭಗ್ನಾವಶೇಷಗಳ ಮೇಲೇ ಮಸೀದಿ ಕಟ್ಟಲಾಯಿತೋ ಎಂಬ ಸತ್ಯ ಪತ್ತೆಗಾಗಿ, ಭಾರತ ಪುರಾತತ್ವ ಇಲಾಖೆ (ಎಎಸ್‌ಐ) ಯಿಂದ ಸತತ 2ನೇ ದಿನ ಸರ್ವೆ ಮಾಡಲಾಗಿದೆ.

ಈ ವೇಳೆ ಎಎಸ್‌ಐ ತಂಡಕ್ಕೆ ಜ್ಞಾನವಾಪಿ ಮಸೀದಿ ಸಂಕೀರ್ಣದ ಭಗ್ನಾವಶೇಷಗಳಡಿ ದೇವರ ವಿಗ್ರಹಗಳ ಚೂರುಗಳು ಪತ್ತೆಯಾಗಿವೆ.
ಈ ಕುರಿತು ಹಿಂದು ಪರ ವಕೀಲ ಸುಧೀರ್ ತ್ರಿಪಾಠಿ ಮಹತ್ವದ ಮಾಹಿತಿ ಬಹಿರಂಗ ಪಡಿಸಿದ್ದು, ಸಮೀಕ್ಷೆ ಮುಂದುವರೆದಂತೆ ವಿಗ್ರಹಗಳೂ ಕಾಣಸಿಗುವ ಭರವಸೆ ಇದೆ ಎಂದು
ಆಶಾವಾದ ವ್ಯಕ್ತಪಡಿಸಿದ್ದಾರೆ.

ಮೊದಲ ದಿನದ ಸಮೀಕ್ಷೆಯಲ್ಲಿ ತ್ರಿಶೂಲ ಸೇರಿದಂತೆ ದೇವಸ್ಥಾನದ ಹಲವು ಕುರುಹುಗಳ ಪತ್ತೆಯಾಗಿತ್ತು. 2ನೇ ದಿನದ ಸಮೀಕ್ಷೆಯಲ್ಲಿ ಭಗ್ನಗೊಂಡಿರುವ ಮೂರ್ತಿಯ ಅವಶೇಷಗಳು ಪತ್ತೆಯಾಗಿದೆ. ಸಮೀಕ್ಷೆಗೆ ಇಂತೆಜಾಮಿಯಾ ಮಸೀದಿ ಸಮಿತಿ ಸಹಕಾರ ನೀಡುತ್ತಿದೆ. ಕೆಲ ಬಾಗಿಲುಗಳನ್ನು ತೆರೆಯಲು ಕೀ ನೀಡಿದ್ದಾರೆ. ಮಸೀದಿಯ ಗುಮ್ಮಟ ಇರುವ ಮುಖ್ಯ ಪ್ರಾಂಗಣದ ಸರ್ವೆಯನ್ನು ಇಂದು ಮಾಡಲಾಗಿದೆ ಎಂದಿದ್ದಾರೆ. ಮಸೀದಿಯಲ್ಲಿ ಹಿಂದು ದೇವಾಲಯದ ಹಲವು ಕುರುಹುಗಳಿವೆ. ಸಮೀಕ್ಷೆ ಪೂರ್ಣಗೊಂಡ ಬಳಿಕ ಪುರಾತತ್ವ ಇಲಾಖೆ ವರದಿ ಒಪ್ಪಿಸಲಿದೆ ಎಂದು ತಿಳಿಸಿದರು.

ಪ್ರಧಾನ ಗುಂಬಜದಡಿಯಿರುವ ಸೆಂಟ್ರಲ್ ಹಾಲ್‌ನ ಪರಾಮರ್ಶೆಯೀಗ ಸಾಗಿದೆ ಎಂದು ಹಿಂದು ಪರ ಮತ್ತೋರ್ವ ವಕೀಲ ಸುಭಾಷ್ ನಂದನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇತ್ತ ವೈಜ್ಞಾನಿಕ ಸಮೀಕ್ಷಾ ವರದಿಯನ್ನು ಸಲ್ಲಿಸಲು ಪುರಾತತ್ವ ಇಲಾಖೆಗೆ ನೀಡಲಾಗಿದ್ದ ಕಾಲಾವಧಿಯನ್ನು ವಾರಾಣಸಿ ಜಿಲ್ಲಾ ನ್ಯಾಯಾಲಯ 4 ವಾರಗಳ ಕಾಲ ವಿಸ್ತರಿಸಿದೆ. ಪುರಾತತ್ವ ಇಲಾಖೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಎ.ಕೆ.ವಿಶ್ವೇಶ ಅವರು, ಗಡುವನ್ನು ಆ.4ರಿಂದ ಸೆ.4ಕ್ಕೆ ವಿಸ್ತರಿಸಿದ್ದಾರೆ. ಪುರಾತತ್ವ ಇಲಾಖೆ ಕೈಗೊಂಡಿದ್ದ ಸಮೀಕ್ಷೆಗೆ ಜು.24ರಂದು ತಡೆ ನೀಡಲಾಗಿತ್ತು. ಇದೀಗ ಈ ಮುಂಚಿನ ಆದೇಶದಂತೆ ಆ.4ರೊಳಗೆ ಸಮೀಕ್ಷೆ ಪೂರ್ಣಗೊಂಡಿರಲಿಲ್ಲ. ಹೀಗಾಗಿ ಅವಧಿ ವಿಸ್ತರಣೆ ಕೋರಿ ಪುರಾತತ್ವ ಇಲಾಖೆ ಅರ್ಜಿ ಸಲ್ಲಿಸಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!