ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ಕ್ಕೆ ಐವತ್ತು ವರ್ಷ ತುಂಬಿದ್ದು, ಈ ವರ್ಷದಿಂದಾದರೂ ಘನತೆ ಬದಲಾಯಿಸಿ. ಬಿಡಿಎ ಎಂದರೆ ವ್ಯಾಪಾರ, ಬ್ರೋಕರೇಜ್ ಎಂಬ ಕಳಂಕ ತೆಗೆದುಹಾಕಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸಲಹೆ ನೀಡಿದರು.
ನಮಗೆ ಏನು ತರಬೇತಿ ನೀಡಿದ್ದಾರೆ ಎಂದು ನಿಮಗೆ ಅಚ್ಚರಿಯಾಗಬಹುದು. ನಾವು ಎಷ್ಟೇ ಬುದ್ಧಿವಂತರಾದರೂ ಜ್ಞಾನ, ಅನುಭವದ ಮೂಲಕ ಸಾಯುವವರೆಗೂ ಕಲಿಯುವ ಅಗತ್ಯವಿರುತ್ತದೆ. ಹೊಸ ತಲೆಮಾರು, ಹೊಸ ವ್ಯವಸ್ಥೆ ಬರುತ್ತದೆ. ನಾವು ಅಂಕಿಗಳನ್ನು ಗುಣಿತ ಮಾಡುತ್ತಿದ್ದೆವು, ನಂತರ ಕ್ಯಾಲ್ಕುಲೇಟರ್ ಬಂತು. ನಂತರ ಕಂಪ್ಯೂಟರ್, ಈಗ ಕೃತಕ ಬುದ್ಧಿಮತ್ತೆಯ ಕಾಲ ಬಂದಿದೆ. ಈಗ ಭೂ ಮಾಪನವನ್ನು ಟೇಪ್ ಹಿಡಿದು ಮಾಡುವ ಅಗತ್ಯವಿಲ್ಲ, ಡ್ರೋನ್ ಮೂಲಕವೇ ಅಳತೆ ಮಾಡಬಹುದಾಗಿದೆ ಎಂದು ತಿಳಿಸಿದರು.
ನಾನು ನನ್ನದೇ ಆದ ರೀತಿಯ ಇಂಟಿಲಿಜೆನ್ಸ್ ಮೂಲಕ ನಿಮ್ಮಲ್ಲಿ ನಡೆಯುತ್ತಿರುವ ಸಂತೆ, ದಂಧೆ, ಏಜೆಂಟ್‌ಗಳ ಪಟ್ಟಿ ಪಡೆಯಲು ಆರು ತಿಂಗಳು ಬೇಕಾಯಿತು. ಪ್ರತಿ ಹಂತದಲ್ಲಿ ಎಷ್ಟು ಕೊಳಕಿದೆ, ಎಷ್ಟು ಒಳ್ಳೆಯದಿದೆ ಎಂಬುದನ್ನು ಅರಿತಿದ್ದೇನೆ. ಹೀಗಾಗಿ ಎಲ್ಲ ದಾಖಲೆಗಳನ್ನು ಡಿಜಿಟಲ್ ಸ್ಕ್ಯಾನ್ ಮಾಡಲು ತೀರ್ಮಾನಿಸಿದ್ದೇನೆ. ಕೆಲವರಿಗೆ ಇದರಿಂದ ಸಮಾಧಾನವಾಗದಿರಬಹುದು. ನಿಮ್ಮಲ್ಲಿ ಈ ರೀತಿ ಕೇವಲ 10% ಮಾತ್ರ ಇರಬಹುದು. ಅವರಿಂದ ಇಡೀ ಬಿಡಿಎಗೆ ಕೆಟ್ಟ ಹೆಸರು ಬರುತ್ತಿದೆ. ನಮ್ಮ ಆತ್ಮಸಾಕ್ಷಿಗೆ ಒಪ್ಪುವಂತೆಯಾದರೂ ನಾವು ಬಿಡಿಎ ಘನತೆಯನ್ನು ಬದಲಿಸಿಕೊಂಡು ಹೋಗಬೇಕು. ಈ ಬಗ್ಗೆ ನಿಮಗೆ ಮಾರ್ಗದರ್ಶನ ನೀಡಲು ತರಬೇತಿ ನೀಡುತ್ತಿದ್ದೇವೆ ಎಂದು ತಿಳಿಸಿದರು.

