ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯಪುರದ ಮಮದಾಪುರ ಗ್ರಾಮ ಪಂಚಾಯಿತಿಯ 1,494.38 ಎಕರೆ ಅರಣ್ಯ ಪ್ರದೇಶಕ್ಕೆ ಶ್ರೀ ಸಿದ್ದೇಶ್ವರ ಸ್ವಾಮೀಜಿ ಜೀವವೈವಿಧ್ಯ ಪರಂಪರೆಯ ತಾಣ ಎಂದು ಘೋಷಿಸಿ ರಾಜ್ಯ ಸರ್ಕಾರ ಬುಧವಾರ ಅಧಿಸೂಚನೆ ಹೊರಡಿಸಿದೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರು, ತಮ್ಮ ಆಧ್ಯಾತ್ಮಿಕ ಬೋಧನೆಗಳಿಂದ ಜನಮನ ಗೆದ್ದಿದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಪರಿಸರ ಸಂರಕ್ಷಣೆ ಮತ್ತು ಸಮುದಾಯ ಯೋಗಕ್ಷೇಮಕ್ಕೂ ದೊಡ್ಡ ಕೊಡುಗೆ ನೀಡಿದ್ದಾರೆ.
ಶ್ರೀಗಳ ಸ್ಮರಣಾರ್ಥ ಅವರ 2ನೇ ಪುಣ್ಯ ಸ್ಮರಣೆಯ ದಿನವಾದ ಜನವರಿ 2ರಂದು ವಿಜಯಪುರದಲ್ಲಿ ವಿಧ್ಯುಕ್ತವಾಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಜೀವವೈವಿಧ್ಯ ಪಾರಂಪರಿಕ ತಾಣ ಫಲಕವನ್ನು ಅನಾವರಣ ಮಾಡಲಾಗುವುದು ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಶೇ.5ರಷ್ಟು ಅರಣ್ಯ ಪ್ರದೇಶವಿದ್ದು, ವಿಜಯಪುರದಲ್ಲಿ ಶೇ.1ಕ್ಕಿಂತ ಕಡಿಮೆ ಇದೆ. ಸರ್ಕಾರ ಈ ಘೋಷಣೆಯು ಹಸಿರು ಹೊದಿಕೆಯ ಸಂರಕ್ಷಣೆಯನ್ನು ಉತ್ತೇಜಿಸುತ್ತದೆ ಎಂದು ತಿಳಿಸಿದರು.