ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ತೀನ್ ಮೂರ್ತಿ ಭವನದಲ್ಲಿರುವ ನೆಹರೂ ಮೆಮೋರಿಯಲ್ ಮ್ಯೂಸಿಯಂ ಆಂಡ್ ಲೈಬ್ರೆರಿಯನ್ನು ಪ್ರಧಾನಮಂತ್ರಿ ಮೆಮೋರಿಯಲ್ ಮ್ಯೂಸಿಯಂ ಆಂಡ್ ಲೈಬ್ರೆರಿ ಸೊಸೈಟಿ ಎಂದುಮರುನಾಮಕರಣ ಮಾಡುವ ತೀರ್ಮಾನ ಮಾಡಿದೆ.
ಇದರ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದ ವಿರುದ್ಧ ಟೀಕಾಪ್ರಹಾರ ಮಾಡಿದ್ದು, ಸಣ್ಣತನ ಇದರಲ್ಲಿ ಕಾಣುತ್ತಿದೆ ಎಂದು ಟೀಕಿಸಿದೆ.
ಜವಾಹರಲಾಲ್ ನೆಹರು ಅವರ ಅಧಿಕೃತ ನಿವಾಸವಾಗಿದ್ದ ತೀನ್ ಮೂರ್ತಿ ಭವನದ ಆವರಣದಲ್ಲಿ ಪ್ರಧಾನಮಂತ್ರಿ ಸಂಗ್ರಹಾಲಯವನ್ನು ಉದ್ಘಾಟಿಸಿದ ಸುಮಾರು ಒಂದು ವರ್ಷದ ನಂತರ ಸೊಸೈಟಿಯನ್ನು ಮರುನಾಮಕರಣ ಮಾಡುವ ನಿರ್ಧಾರ ಮಾಡಲಾಗಿದೆ. ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿಯ (ಎನ್‌ಎಂಎಂಎಲ್) ವಿಶೇಷ ಸಭೆಯಲ್ಲಿ ಅದರ ಹೆಸರನ್ನು ಬದಲಾಯಿಸಲು ನಿರ್ಧರಿಸಲಾಗಿದೆ ಎಂದು ಸಂಸ್ಕೃತಿ ಸಚಿವಾಲಯ ಶುಕ್ರವಾರ ತಿಳಿಸಿದೆ.
ಸಭೆಯ ಬಳಿಕ ಸೊಸೈಟಿಯ ಉಪಾಧ್ಯಕ್ಷರಾಗಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡಿ, ಹೆಸರಿನ ಬದಲಾವಣೆಯ ಪ್ರಸ್ತಾಪವನ್ನು ಎಲ್ಲರೂ ಸ್ವಾಗತಿಸಿದರು. ಏಕೆಂದರೆ ಸಂಸ್ಥೆಯು ಜವಾಹರಲಾಲ್ ನೆಹರು ಅವರಿಂದ ನರೇಂದ್ರ ಮೋದಿಯವರವರೆಗಿನ ಎಲ್ಲಾ ಪ್ರಧಾನ ಮಂತ್ರಿಗಳ ಕೊಡುಗೆಗಳನ್ನು ಮತ್ತು ಅವರು ಎದುರಿಸುತ್ತಿರುವ ವಿವಿಧ ಸವಾಲುಗಳಿಗೆ ಅವರ ಪ್ರತಿಕ್ರಿಯೆಗಳನ್ನು ತನ್ನ ಹೊಸ ರೂಪದಲ್ಲಿ ಪ್ರದರ್ಶಿಸುತ್ತದೆ ಎಂದು ತಿಳಿಸಿದ್ದಾರೆ.
ಆದ್ರೆ ಕಾಂಗ್ರೆಸ್ ಪಕ್ಷ ಇದನ್ನು ಸೇಡಿನ ಕ್ರಮ ಎಂದು ಹೇಳಿದ್ದು, ಕಟ್ಟಡಗಳಿಗೆ ಇರುವ ಹೆಸರನ್ನು ಬದಲಾವಣೆ ಮಾಡಿದ ತಕ್ಷಣ ನೆಹರು ಹಾಕಿಕೊಟ್ಟ ಪರಂಪರೆ ಅಳಿಸಿ ಹೋಗೋದಿಲ್ಲ ಎಂದಿದೆ.
ಕಾಂಗ್ರೆಸ್‌ನ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟೀಕಿಸಿ ಟ್ವೀಟ್ ಮಾಡಿದ್ದು, ‘ ಸಣ್ಣತನ ಮತ್ತು ಸೇಡಿಗೆ ಯಾವುದಾದರೂ ಹೆಸರಿದ್ದರೆ ಅದು ಮೋದಿ ಮಾತ್ರ. ಕಳೆದ 59 ವರ್ಷಗಳವರೆಗೂ ಎನ್‌ಎಂಎಂಎಲ್ ಜಾಗತಿಕ ಹೆಗ್ಗುರುತಾಗಿ ಮಾತ್ರವಲ್ಲದೇ, ಪುಸ್ತಕಗಳ ಹಾಗೂ ಇತಿಹಾಸಗಳಿಗೆ ನೆಲೆಯಾಗಿತ್ತು. ಆದರೆ, ಇದು ಇಂದಿನಿಂದ ಪ್ರಧಾನಮಂತ್ರಿ ಮ್ಯೂಸಿಯಂ ಮತ್ತು ಸೊಸೈಟಿ ಎಂದು ಕರೆದುಕೊಳ್ಳಲಿದೆ’ ಎಂದು ಬರೆದಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ ಸಿ ವೇಣುಗೋಪಾಲ್ ಮಾತನಾಡಿದ್ದು, ತೀನ್ ಮೂರ್ತಿ ಭವನವು ಭಾರತದ ಭವಿಷ್ಯವನ್ನು ರೂಪಿಸಿದ ಐತಿಹಾಸಿಕ ಸ್ಮಾರಕವಾಗಿದೆ. ಸ್ವಾತಂತ್ರ್ಯೋತ್ತರ ಭಾರತದ ವೈಭವದ ಶಿಲ್ಪಿ ನಮ್ಮ ಮೊದಲ ಪ್ರಧಾನಿ ಜವಾಹರಲಾಲ್ ನೆಹರು. ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದ ಹೆಸರನ್ನು ಬದಲಾಯಿಸುವ ಮೂಲಕ ಅವರ ಪರಂಪರೆಯನ್ನು ಅಳಿಸಿಹಾಕುವುದು ಸಣ್ಣತನದ ಕೆಲಸ. ಇದು ಪ್ರಸ್ತುತ ಆಡಳಿತದ ಘನತೆಯನ್ನು ಇನ್ನಷ್ಟು ಕುಗ್ಗಿಸುತ್ತದೆ ಎಂದು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.