ಹೊಸದಿಗಂತ ವರದಿ ರಾಯಚೂರು:
ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಒಂದನೇ ಘಟಕ ನವೀಕರಣದ ಪ್ರಸ್ತಾವನೆ ಇದ್ದು, ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಶಕ್ತಿನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಖೋತ್ಪನ್ನ ವಿದ್ಯುತ್ ಘಟಕಗಳು ಹಳೆಯದಾಗಿದ್ದು, ಆದ್ಯತೆಗೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಉಚಿತ ವಿದ್ಯುತ್ ನೀಡುತ್ತಿರುವ ಹಿನ್ನಲೆಯಲ್ಲಿ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ ಎನ್ನುವುದು ಸುಳ್ಳು. ನಿರ್ವಹಣೆ ವಿಚಾರದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿರುವ ಹಿನ್ನಲೆಯಲ್ಲಿ ವಿತರಣೆಯಲ್ಲಿ ವಿಳಂಬವಾಗಿದೆ ಎಂದರು.
ಗೃಹಜ್ಯೋತಿ ಒಳ್ಳೆಯ ಕಾರ್ಯಕ್ರಮ. ರಾಜ್ಯದ 2.14 ಕೋಟಿ ಜನತೆಗೆ ಇದರ ಸೌಲಭ್ಯ ದೊರೆಯಲಿದೆ. 200 ಯುನಿಟ್ ಉಚಿತ ಸಿಗಲಿದೆ. ಈಗಾಗಲೇ 52 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ವಿದ್ಯುತ್ ಬೆಲೆ ಏರಿಕೆ ಹಿಂದಿನ ಸರ್ಕಾರದ ಕೊಡುಗೆಯಾಗಿದೆ. ನಾಲ್ಕು ವರ್ಷ ನಾವು ಅಧಿಕಾರ ನಡೆಸಿದ್ದೇವಾ?. ಬೆಲೆ ಏರಿಕೆ ಕುರಿತು ಮಾರ್ಚ್ 12ಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ತಾವೇ ದರ ಹೆಚ್ಚಿಸಿ ಬಿಜೆಪಿಯವರು ಈಗ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಹೇಳಿದರು.
ವೈಟಿಪಿಎಸ್ ಭೂ ಸಂತ್ರಸ್ತರಿಗೆ ಉದ್ಯೋಗ ನೀಡುವ ವಿಚಾರ ಗಮನಕ್ಕೆ ಬಂದಿದೆ. ಪಾರದರ್ಶಕ ಕಾಯ್ದೆಯಡಿಯೇ ನಾವು ಕ್ರಮ ಜರುಗಿಸಬೇಕಾಗುತ್ತದೆ. ನಾನು ಎಲ್ಲ ವಿಚಾರಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಲು ಬಂದಿರುವೆ. ಎಲ್ಲ ವಿಚಾರಗಳ ಕುರಿತು ಸಮಗ್ರ ಮಾಹಿತಿ ಪಡೆಯುತ್ತೇನೆ ಎಂದರು.