ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ಖಗೋಳ ತಜ್ಞ, ವಿಜ್ಞಾನ ಸಂವಹನಕಾರ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಡಾ. ಜಯಂತ್ ನಾರ್ಲಿಕರ್ ಮಂಗಳವಾರ ಪುಣೆಯಲ್ಲಿ ನಿಧನರಾಗಿದ್ದಾರೆ. ಜಯಂತ್ ನಾರ್ಲಿಕರ್ ಅವರಿಗೆ 87 ವರ್ಷ ವಯಸಾಗಿತ್ತು. ಅವರು ಇತ್ತೀಚೆಗೆ ಶಸ್ತ್ರಚಿಕಿತ್ಸೆಯೊಂದಕ್ಕೆ ಒಳಗಾಗಿದ್ದರು.
ಬಿಗ್ ಬ್ಯಾಂಗ್ ಸಿದ್ಧಾಂತಕ್ಕೆ ಪರ್ಯಾಯಗಳನ್ನು ಪ್ರಸ್ತಾಪಿಸಿದ್ದಕ್ಕಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಭಾರತದಲ್ಲಿ ಖಗೋಳಶಾಸ್ತ್ರ ಮತ್ತು ಖಗೋಳ ಭೌತಶಾಸ್ತ್ರದ ಸಂಶೋಧನೆಯ ವಿಶ್ವ ದರ್ಜೆಯ ಸಂಸ್ಥೆಗಳನ್ನು ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತೀಯ ವಿಜ್ಞಾನ ಕ್ಷೇತ್ರಕ್ಕೆ ನಾರ್ಲಿಕರ್ ಅವರು ಆಗಾಧ ಕೊಡುಗೆಯನ್ನು ನೀಡಿದ್ದಾರೆ.
ನಾರ್ಲಿಕರ್ ಅವರು ಜುಲೈ 19, 1938ರಂದು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಜನಿಸಿದ್ದರು. ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಆರಂಭಿಕ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು. ನಾರ್ಲಿಕರ್ ಅವರ ತಂದೆ ವಿಷ್ಣು ವಾಸುದೇವ ನಾರ್ಲಿಕರ್ ಅದೇ ವಿಶ್ವವಿದ್ಯಾಲಯದಲ್ಲಿ ಗಣಿತ ಪ್ರಾಧ್ಯಾಪಕರಾಗಿದ್ದರು. ಬಳಿಕ ನಾರ್ಲಿಕರ್ ಅವರು ಉನ್ನತ ವಿದ್ಯಾಭ್ಯಾಸಕ್ಕಾಗಿ ಕೇಂಬ್ರಿಡ್ಜ್‌ಗೆ ತೆರಳಿದ್ದರು.
ನಾರ್ಲಿಕರ್ ಅವರಿಗೆ 26 ವರ್ಷ ವಯಸ್ಸಿನಲ್ಲೇ ಪದ್ಮಭೂಷಣ, 2004ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಲಭಿಸಿತ್ತು. 2011ರಲ್ಲಿ, ಮಹಾರಾಷ್ಟ್ರ ಸರ್ಕಾರವು ನಾರ್ಲಿಕರ್ ಅವರಿಗೆ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಯಾದ ಮಹಾರಾಷ್ಟ್ರ ಭೂಷಣ ನೀಡಿ ಗೌರವಿಸಿತ್ತು.