ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ವಿವಿಧ ಭಾಷೆಗಳಲ್ಲಿ ಹಾಡುಗಳನ್ನು ಹಾಡಿ ಅಭಿಮಾನಿಗಳ ಮನ ಗೆದ್ದಿದ್ದ ಖ್ಯಾತ ಗಾಯಕ ಮತ್ತು ನಟ ಜುಬೀನ್ ಗರ್ಗ್ ಅವರು ಸಿಂಗಪುರದಲ್ಲಿ ದುರಂತ ಅಂತ್ಯ ಕಂಡಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು. ಸಿಂಗಪುರದಲ್ಲಿ ಸ್ಕೂಬಾ ಡೈವಿಂಗ್ ಮಾಡುವ ವೇಳೆ ನಿಧನ ಹೊಂದಿದ್ದಾರೆ ಎನ್ನಲಾಗಿದೆ. ಅವರನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು ಆದರೆ ಐಸಿಯುನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಮೂಲತಃ ಅಸ್ಸಾಂನವರಾದ ಜುಬೀನ್ ಗರ್ಗ್ ಅವರು ಅಸ್ಸಾಮಿ ಸಿನಿಮಾಗಳ ಖ್ಯಾತ ನಟರಾಗಿದ್ದಷ್ಟೇ ಅಲ್ಲ, ಅನೇಕ ಭಾಷೆಗಳಲ್ಲಿ ಹಾಡುಗಳನ್ನು ಹಾಡಿ ಖ್ಯಾತಿ ಪಡೆದಿದ್ದರು. ಹಿಂದಿ, ಕನ್ನಡ, ಬೆಂಗಾಲಿ, ತಮಿಳು, ತೆಲುಗು, ಮಲಯಾಳಂ, ಪಂಜಾಬಿ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಅವರು ತಮ್ಮ ಗಾಯನ ಕಲೆ ಮೆರೆದಿದ್ದರು. ಎಆರ್ ರೆಹಮಾನ್ ಸೇರಿದಂತೆ ಅನೇಕ ಸಂಗೀತ ನಿರ್ದೇಶಕರ ಮೆಚ್ಚಿನ ಗಾಯಕರಾಗಿದ್ದರು.
ಕನ್ನಡ ಚಿತ್ರರಂಗದಲ್ಲೂ ಜುಬೀನ್ ತಮ್ಮ ಗಾಯನದ ಮೂಲಕ ಗುರುತು ಮೂಡಿಸಿದ್ದರು. ಗಣೇಶ್ ನಟಿಸಿರುವ ಹುಡುಗಾಟ ಚಿತ್ರದ “ಒಮ್ಮೊಮ್ಮೆ ಹೀಗೂ”, ಮಹಾರುದ್ರ ಚಿತ್ರದ “ಅಮ್ಮಾ ನೀನು”, ಪರಿಚಯ ಚಿತ್ರದ ಹಾಡುಗಳಲ್ಲಿ ಅವರ ಸ್ವರ ಕೇಳಿಬಂದಿತ್ತು.
ಹಿಂದಿ ಚಿತ್ರರಂಗದಲ್ಲಿ “ದಿಲ್ ಸೇ”, “ಗ್ಯಾಂಗ್‌ಸ್ಟರ್”, “ಅಶೋಕಾ”, “ಕ್ರಿಶ್” ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅವರು ತಮ್ಮ ಗಾಯನದ ಮೂಲಕ ಜನಮನ ಸೆಳೆದಿದ್ದರು. ವಿಶೇಷವಾಗಿ “ಗ್ಯಾಂಗ್‌ಸ್ಟರ್” ಚಿತ್ರದ ಯಾ ಆಲಿ ಹಾಡು ಭಾರೀ ಹಿಟ್ ಆಗಿ, ಜುಬೀನ್ ಗರ್ಗ್ ಅವರ ಹೆಸರನ್ನು ಮನೆಮಾತು ಮಾಡಿತ್ತು.
ಗಾಯಕನಾಗಿರುವುದರ ಜೊತೆಗೆ ಅವರು ಅಸ್ಸಾಮಿ ಭಾಷೆಯ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಜೊತೆಗೆ ಸಂಗೀತ ನಿರ್ದೇಶನ, ಗೀತ ರಚನೆ, ಚಿತ್ರಕತೆ ಬರವಣಿಗೆ, ಸಿನಿಮಾ ನಿರ್ಮಾಣ ಕ್ಷೇತ್ರದಲ್ಲೂ ತಮ್ಮ ಕೈಚಳಕ ತೋರಿಸಿದ್ದರು.
ಜುಬೀನ್ ಗರ್ಗ್ ಅವರ ಅಕಾಲಿಕ ನಿಧನ ಸಂಗೀತ ಲೋಕಕ್ಕೆ ಭಾರೀ ನಷ್ಟವಾಗಿದೆ. ಅವರ ಅಗಲಿಕೆಯಿಂದ ಸಂಗೀತ ಪ್ರಪಂಚದ ಅನೇಕರು ದುಃಖ ವ್ಯಕ್ತಪಡಿಸಿದ್ದು, ಭಾರತೀಯ ಸಂಗೀತಕ್ಕೆ ಅಳಿಸಿಹೋಗದ ಗುರುತು ಬಿಟ್ಟ ಈ ಗಾಯಕನ ಹಾದಿ ಸದಾ ಸ್ಮರಣೀಯವಾಗಿಯೇ ಉಳಿಯಲಿದೆ.