ರೇಣುಕಾಸ್ವಾಮಿ ಕೇಸ್‌: ದಾಸನ ಫ್ಯಾನ್ಸ್ ವಿರುದ್ಧ ನಟಿ ರಮ್ಯಾ ಗರಂ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿತ್ರನಟ ದರ್ಶನ್ ವಿರುದ್ಧ ನಡೆಯುತ್ತಿರುವ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ, ನಟಿ ಹಾಗೂ ಮಾಜಿ ಸಂಸದೆ ರಮ್ಯಾ (ದಿವ್ಯ ಸ್ಪಂದನ) ಅವರ ಸಾಮಾಜಿಕ ಕಳಕಳಿಯ ಹೇಳಿಕೆಗಳು ಮತ್ತೆ ಚರ್ಚೆಗೆ ಕಾರಣವಾಗಿವೆ. ತಮ್ಮ ಇನ್‌ಸ್ಟಾಗ್ರಾಂ ಮತ್ತು ಎಕ್ಸ್ ಖಾತೆ ಮೂಲಕ, ರೇಣುಕಾಸ್ವಾಮಿ ಕೇಸ್‌ನಲ್ಲಿ ನ್ಯಾಯದ ಪರ ಧ್ವನಿ ಎತ್ತಿರುವ ರಮ್ಯಾ, ದರ್ಶನ್ ಅಭಿಮಾನಿಗಳ ಕಮೆಂಟ್‌ಗಳಿಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

‘ಎಲ್ಲಾ ಡಿ ಬಾಸ್ ಅಭಿಮಾನಿಗಳಿಗೆ ನನ್ನ ಇನ್‌ಸ್ಟಾಗ್ರಾಂ ಖಾತೆಗೆ ಸ್ವಾಗತ. ರೇಣುಕಾಸ್ವಾಮಿ ಕುಟುಂಬಕ್ಕೆ ಯಾಕೆ ನ್ಯಾಯ ಸಿಗಬೇಕು ಎಂಬುದಕ್ಕೆ ನಿಮ್ಮ ಕಮೆಂಟ್‌ಗಳೇ ಸಾಕ್ಷಿ’ ಎಂದು ರಮ್ಯಾ ಖಡಕ್ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಮೂಲಕ ಅವರು ಸಾಮಾಜಿಕ ಜವಾಬ್ದಾರಿಯುಳ್ಳ ವ್ಯಕ್ತಿಯಾಗಿ ತಮ್ಮನ್ನು ತಾವು ಹೊರಹೊಮ್ಮಿಸಿಕೊಂಡಿದ್ದಾರೆ. ದರ್ಶನ್‌ ಬೆಂಬಲಿಗರ ಟೀಕೆಗಳಿಗೆ ಬೇಸತ್ತು, ಅವರು ಕಮೆಂಟ್ ಆಯ್ಕೆಯನ್ನೂ ಆಫ್ ಮಾಡಿದ್ದಾರೆ.

ಇತ್ತೀಚೆಗಷ್ಟೆ, ದರ್ಶನ್ ಜಾಮೀನಿಗೆ ಸಂಬಂಧಿಸಿದ ವಿಚಾರಣೆಯ ನಂತರ, ಸುಪ್ರೀಂ ಕೋರ್ಟ್ ಮೇಲೆ ಜನತೆ ಹೊಂದಿರುವ ನಂಬಿಕೆ ಕುರಿತು ರಮ್ಯಾ ಬರೆದುಕೊಂಡಿದ್ದರು. “ಭಾರತದ ಜನಸಾಮಾನ್ಯರಿಗೆ ಸುಪ್ರೀಂ ಕೋರ್ಟ್ ಒಂದು ಭರವಸೆಯ ಬೆಳಕಾಗಿದೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆ ಇದೆ” ಎಂಬುದಾಗಿ ಅವರು ಸ್ಪಷ್ಟಪಡಿಸಿದ್ದರು.

ಇದು ಮೊದಲ ಬಾರಿ ಅಲ್ಲ, ರಮ್ಯಾ ಸಾಮಾಜಿಕ ನ್ಯಾಯಕ್ಕಾಗಿ ಧ್ವನಿ ಎತ್ತುತ್ತಿರುವುದು. ಇದಕ್ಕೂ ಮುಂಚೆ ಹಲವು ವಿಚಾರಗಳಿಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದಕ್ಕಾಗಿಯೇ ಅವರ ಹಲವಾರು ಅಭಿಮಾನಿಗಳು, “ರಮ್ಯಾ ಅವರು ಸದಾ ನ್ಯಾಯದ ಪರ ನಿಲ್ಲುತ್ತಾರೆ” ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಮೆಚ್ಚುಗೆ ಪೋಸ್ಟ್‌ಗಳನ್ನು ರಮ್ಯಾ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಗಳಲ್ಲಿಯೇ ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!