ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಾನೂನು ಚೌಕಟ್ಟಿನಲ್ಲಿ ಎಲ್ಲಾ ಆಯಾಮದ ತನಿಖೆ ಆಗುತ್ತದೆ. ಈ ದೇಶದಲ್ಲಿ ರಾಷ್ಟ್ರಪತಿ, ಸೆಲಬ್ರೆಟಿ, ಪಂಚರ್ ಹಾಕುವವನಿಗೂ ಒಂದೇ ಕಾನೂನು. ಪ್ರಸಿದ್ದರು, ದೊಡ್ಡವರು ಯಾರೇ ಇದ್ದರೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಕೊಲೆ ಪ್ರಕರಣದ ಕುರಿತಾಗಿ ಬುಧವಾರ ಉಡುಪಿಯಲ್ಲಿ ಪ್ರತಿಕ್ರಿಯಿಸಿದ ಅವರು, ಕಾನೂನು ಎಲ್ಲರಿಗೂ ಒಂದೇ. ಕಾನೂನು ಚೌಕಟ್ಟಿನಲ್ಲಿ ಎಷ್ಟೇ ದೊಡ್ಡವರಿದ್ದರೂ ಶಿಕ್ಷೆಯಾಗುತ್ತದೆ. ನೊಂದ ಕುಟುಂಬಕ್ಕೆ ನ್ಯಾಯ ಸಿಕ್ಕೇ ಸಿಗುತ್ತದೆ. ಈ ಸರ್ಕಾರ ಯಾವ ಭಾಗದ, ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ತಪ್ಪಿತಸ್ಥರಿಗೆ ಖಂಡಿತವಾಗಿ ಶಿಕ್ಷೆಯಾಗಿಯಾಗುತ್ತದೆ, ಸಂತ್ರಸ್ತ ಕುಟುಂಬದ ಜೊತೆ ಸರಕಾರ ಆರ್ಥಿಕವಾಗಿಯೂ ಬೆಂಬಲಕ್ಕೆ ನಿಲ್ಲುತ್ತದೆ ಎಂದು ನುಡಿದರು.
ಹೆಬ್ಬಾಳ್ಕರ್ ಗೆ ಸಿಎಂ ಸಾರಿ ಕೇಳಿದ ವಿಚಾರ
ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದರು. ನನ್ನ ಮಗನ ಪ್ರಚಾರಕ್ಕೆ ನಾಲ್ಕು ಬಾರಿ ಬಂದಿದ್ದರು. ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಮುಖ್ಯಮಂತ್ರಿಗಳೇ ಹೇಳಿದ್ದರು. ಆದರೆ ಫಲಿತಾಂಶ ಈ ರೀತಿ ಬಂದಿದೆ. ಜನರ ತೀರ್ಪಿಗೆ ತಲೆಬಾಗಿದ್ದೇವೆ. ಮುಖ್ಯಮಂತ್ರಿಗಳ ದೊಡ್ಡಗುಣ, ನನ್ನನ್ನು ನೋಡಿದ ತಕ್ಷಣ ಎಲ್ಲ ಚೆನ್ನಾಗಿ ಇತ್ತು. ಯಾಕೆ ಹೀಗಾಯ್ತು ಸಾರಿ (sorry) ಎಂದು ಕೇಳಿದರು.
ಸೋಲಿಗೆ ಕಾರಣ ಏನು ಎಂದು ಈಗಲೂ ಹುಡುಕುತ್ತಾ ಇದ್ದೇವೆ, ಸೋತ ನಂತರ ಯಾರ ಮೇಲೂ ಬೊಟ್ಟು ಮಾಡಬಾರದು. ಬೇರೊಬ್ಬರ ಮೇಲೆ ಬೊಟ್ಟು ಮಾಡುವುದು ನಾಯಕತ್ವದ ಲಕ್ಷಣ ಅಲ್ಲ. ನಮ್ಮ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಬೇಕು. ಇದು ನಿರಂತರವಾಗಿ ಹರಿಯುವ ನೀರು, ಇದು ಕೊನೆ ಅಲ್ಲ. ಇದು ಅಂತ್ಯವೂ ಅಲ್ಲ. ಐದು ವರ್ಷಕೊಮ್ಮೆ ಚುನಾವಣೆ ಬರುತ್ತದೆ, ಈ ಚುನಾವಣೆ ನನ್ನ ಮಗನಿಗೂ ಒಂದು ಪಾಠ. ನಾನು ಕೂಡ ಎರಡು ಬಾರಿ ಸೋತಿದ್ದೆ, ಗಟ್ಟಿಯಾಗಿ ನಿಂತುಕೊಂಡಿದ್ದೇನೆ. ನನ್ನ ಮಗ ಧೈರ್ಯವಂತ ಇದ್ದಾನೆ, ಈ ಸೋಲನ್ನೆ ಗೆಲುವಿನ ಮೆಟ್ಟಿಲಾಗಿ ಸ್ವೀಕಾರ ಮಾಡುತ್ತಾನೆ ಎಂದರು.