ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಬುಧವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಮೂವರು ಭಯೋತ್ಪಾದಕರು ಬಲಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಒಟ್ಟು ನಾಲ್ವರು ಭಯೋತ್ಪಾದಕರು ಅಡಗಿದ್ದು, ಮೂವರ ಹುಟ್ಟಡಗಿಸಲಾಗಿದೆ. ಜೂನ್ 11 ಮತ್ತು 12 ರಂದು ಗುಡ್ಡಗಾಡು ಜಿಲ್ಲೆಯಲ್ಲಿ ನಡೆದ ಅವಳಿ ಭಯೋತ್ಪಾದಕ ದಾಳಿಯ ನಂತರ ಸೇನೆ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಜೊತೆಗೆ ಪೊಲೀಸರ ತೀವ್ರ ಶೋಧ ಮತ್ತು ಕಾರ್ಡನ್ ಕಾರ್ಯಾಚರಣೆಯ ನಡುವೆ ಬೆಳಿಗ್ಗೆ 9.50 ರ ಸುಮಾರಿಗೆ ಗಂಡೋ ಪ್ರದೇಶದ ಬಜಾದ್ ಗ್ರಾಮದಲ್ಲಿ ಗುಂಡಿನ ಚಕಮಕಿ ಪ್ರಾರಂಭವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹತ್ಯೆಗೀಡಾದ ಉಗ್ರರು ಇತ್ತೀಚೆಗೆ ಕಾಶ್ಮೀರದಲ್ಲಿ ಸೇನೆ ಮತ್ತು ಪೊಲೀಸರ ಮೇಲೆ ನಡೆದ ದಾಳಿಯಲ್ಲಿ ಉಗ್ರರು ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ. ಎನ್‍ಕೌಂಟರ್ (Encounter) ನಡೆದ ಜಾಗದಿಂದ ಅಮೆರಿಕ ನಿರ್ಮಿತ ಎಂ4 ಕಾರ್ಬೈನ್ ಗನ್ ಸೇರಿದಂತೆ ಅಪಾರ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೂವರು ಭಯೋತ್ಪಾದಕರು ಅಡಗಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವಾರ ಭಯೋತ್ಪಾದಕರ ಸರಣಿ ದಾಳಿಯ ನಂತರ ದೋಡಾ ಮತ್ತು ರಾಜೌರಿ, ಪೂಂಚ್ ಪ್ರದೇಶಗಳಲ್ಲಿ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ. ಜೂ.11 ರಂದು, ಸೇನಾ ಶಿಬಿರದ ಮೇಲೆ ದಾಳಿ ನಡೆಸಲಾಗಿತ್ತು. ಇದರಲ್ಲಿ ಐವರು ಸೈನಿಕರು ಮತ್ತು ವಿಶೇಷ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದರು. ಇನ್ನೊಂದು ಘಟನೆಯಲ್ಲಿ, ಭಯೋತ್ಪಾದಕರು ಪೊಲೀಸ್ ಶಿಬಿರದ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಓರ್ವ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು.