ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಾಕೃತಿಕ ವಿಕೋಪದ ಕಾರಣದಿಂದ ಕೈಲಾಸ ಮಾನಸ ಸರೋವರ ರಸ್ತೆಯನ್ನು ಮುಚ್ಚಲಾಗಿದ್ದು ಬುಂದಿ ಗ್ರಾಮದಲ್ಲಿ ಸಿಲುಕಿದ್ದ ಕನಿಷ್ಠ 40 ಯಾತ್ರಾರ್ಥಿಗಳನ್ನು ಉತ್ತರಾಖಂಡ ಸರ್ಕಾರ ಭಾನುವಾರ ರಕ್ಷಿಸಿದೆ. ಸಿಕ್ಕಿಬಿದ್ದ ಕೈಲಾಸ ಯಾತ್ರಾರ್ಥಿಗಳನ್ನು ಹೆಲಿಕಾಪ್ಟರ್ ಬಳಸಿ ರಕ್ಷಿಸಿ ಧಾರ್ಚುಲಾಗೆ ಕರೆತರಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.
ವರದಿಗಳ ಪ್ರಕಾರ, ಕೈಲಾಸ ಯಾತ್ರೆಯ ಮಾರ್ಗದಲ್ಲಿ ದೊಡ್ಡ ಬಂಡೆಗಳು ಉರುಳಿದ ಕಾರಣ ರಸ್ತೆಯನ್ನು ಮುಚ್ಚಲಾಗಿದೆ. 36 ಗಂಟೆಗಳ ಕಾಲ ಸಿಕ್ಕಿಬಿದ್ದ ನಂತರ ಅವರನ್ನು ರಕ್ಷಿಸಲಾಗಿದ್ದು “ಬಂಡೆಗಳು ಉರುಳಿದ ಪರಿಣಾಮ ಕೈಲಾಸ ಯಾತ್ರೆಗೆ ತೆರಳಿದ್ದ ಯಾತ್ರಾರ್ಥಿಗಳು ಬುಂದಿ ಗ್ರಾಮದಲ್ಲಿ ಸಿಲುಕಿಕೊಂಡಿದ್ದರು, ಅವರೆಲ್ಲರನ್ನೂ ಏರ್ ಲಿಫ್ಟ್ ಮೂಲಕ ರಕ್ಷಿಸಲಾಗಿದೆ” ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಯಾತ್ರಾರ್ಥಿಗಳಿಗೆ ಕೈಲಾಶ ಯಾತ್ರೆಗೆ ತೆರಳಲು ಎರಡು ಮಾರ್ಗಗಳಿದ್ದು . ಒಂದು ಉತ್ತರಾಖಂಡದ ಲಿಪುಲೇಖ್ ಪಾಸ್ ಮೂಲಕ ಹೋಗುತ್ತದೆ, ಇನ್ನೊಂದು ಸಿಕ್ಕಿಂನ ನಾಥು ಲಾ ಪಾಸ್ ಮೂಲಕ ಹೋಗುತ್ತದೆ. ಪ್ರಸ್ತುತ ಉತ್ತರಾಖಂಡ್ ಮಾರ್ಗವು ಮುಚ್ಚಲ್ಪಟ್ಟಿದೆ. ಉತ್ತರಾಖಂಡದಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವು ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿದೆ. ಬಿಗಿ ಭದ್ರತೆಯ ನಡುವೆ ರಾಜ್ಯದಲ್ಲಿ ಕನ್ವರ್ ಯಾತ್ರೆ ಆರಂಭವಾಗಿದೆ.