ಹೊಸದಿಗಂತ ವರದಿ, ಗೋಕರ್ಣ:
ಸಮುದ್ರದ ಸುಳಿಗೆ ಸಿಲುಕಿ ಜೀವಾಪಾಯದಲ್ಲಿದ್ದ ಮೂವರು ಪ್ರವಾಸಿಗರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ ಘಟನೆ ಇಲ್ಲಿ ಓಂ ಕಡಲತೀರದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.
ಮಹಾರಾಷ್ಟ್ರ ಪುಣೆಯವರಾದ ನಿತ್ತು ನಿಕ್ಕಮ್(೨೩), ಸಂಕಲ್ಪ ಬೋರಾಡೆ(೨೮),ಶಾರ್ದೂಲ್ ಜಗಪತ್(೨೩) ಜೀವಾಪಾಯದಿಂದ ಪಾರಾಗಿ ಬಂದವರಾಗಿದ್ದು, ಎಲ್ಲರು ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.
ಜೀವರಕ್ಷಕ ಸಿಬ್ಬಂದಿಗಳಾದ ಹರೀಶ ಮೂಡಂಗಿ,ಮಂಜೇಶ ಹರಿಕಾಂತ್, ಪ್ರಭಾಕರ ಅಂಬಿಗ ಪ್ರಾಣ ಉಳಿಸಿದ ಜೀವರಕ್ಷಕ ಸಿಬ್ಬಂದಿಗಳಾಗಿದ್ದು, ಇವರಿಗೆ ಪ್ರವಾಸಿ ಮಿತ್ರ ನಾರಾಯಣ ಮುಕ್ರಿ, ಸ್ಥಳೀಯರಾದ ವೆಂಕಟಿ ಗೌಡ ರಕ್ಷಣಾ ಕಾರ್ಯಕ್ಕೆ ಸಹಕಾರ ನೀಡಿದ್ದಾರೆ. ತೀರಾ ಅಪಾದಲ್ಲಿರುವ ಜಾಗದಲ್ಲಿ ಸಿಲುಕಿದ್ದ ಪ್ರವಾಸಿಗರನ್ನು ತಮ್ಮ ಜೀವದ ಹಂಗು ತೊರೆದು ಪ್ರವಾಸಿಗರ ಜೀವ ಕಾಪಾಡಿದ ಈ ತಂಡಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.